Monday, December 28, 2009

ಸೊನ್ನೆ


(ಚಿತ್ರ ಕೃಪೆ: ಅಂತರ್ಜಾಲ)

ಎಂದಿನಂತೆ ಬೆಳಿಗ್ಗೆ ಬೇಗನೆ ಎದ್ದು (ನಿಜ ಹೇಳ್ತಾ ಇದೀನಿ ರೀ) ಕಾಲೇಜ್'ಗೆ ಹೋದೆ. ಕಾಲೇಜ್'ನ ಆವರಣದ ಒಳಗೆ, ಕ್ಲಾಸ್ ಗೆ ಹೋಗುವ ದಾರಿಯಲ್ಲಿ Placement ಆಫೀಸಿನ ಮುಂದೆ ಕಾಲೇಜ್'ನ ಹುಡುಗರು ದೊಡ್ಡದಾದ ಒಂದು ಸಾಲಿನಲ್ಲಿ ನಿಂತಿದ್ದರು. ನನ್ನ ಕೆಲವು ಮಿತ್ರರು ಕೂಡ ಅದೇ ಸಾಲಿನಲ್ಲಿ ನಿಂತಿದ್ದರು. ಅಲ್ಲೇ ಹಾಕಿದ್ದ ಬ್ಯಾನೆರ್ ನೋಡಿದೆ. "ಉಚಿತ ಕಣ್ಣಿನ ಪರೀಕ್ಷೆ" ಎಂದಿತ್ತು. ನನ್ನ ಮಿತ್ರರು ನನ್ನನ್ನು ಕರೆದು "ಸಾಲಿನಲ್ಲಿ ನಿಂತ್ಕೋ" ಎಂದರು. ನಾನು ಸಾಲಿನಲ್ಲಿ ನಿಂತೆ.
ಒಬ್ಬೊಬ್ಬರು ಕಣ್ಣು ಪರೀಕ್ಷೆ ಮಾಡುತ್ತಿದ್ದ ಕೋಣೆಯ ಒಳಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಹೊರ ಬರುತ್ತಿದ್ದರು. ಹೀಗೆ ಹೊರಬಂದ ನನ್ನ ಸ್ನೇಹಿತರು, ಕೈಯಲ್ಲಿ ಹಿಡಿದ ಒಂದು ಚೀಟಿಯನ್ನು ತೋರಿಸಿ "ಮಗ, ನನಗೆ ೦.೨೫ ಇದೆ", "ಮಗ, ನನಗೆ ೪.೫ ಇದೆ"... ಎಂದು ಒಬ್ಬೊಬ್ಬರು ಒಂದೊಂದು ಅಂಕಿ ಹೇಳುತ್ತಿದ್ದರು. ಅದು ಅವರಿಗೆ ಇರುವ ದೃಷ್ಟಿ ದೋಷದ ಅಂಕಿ. ತಪಾಸಣೆ ಮಾಡಿದ ವೈದ್ಯರು, ಅವರಿಗೆ ಕನ್ನಡಕ ಧರಿಸಲೋ, ಅಥವಾ ಇರುವ ಕನ್ನಡಕವನ್ನು ಬದಲಿಸಲೋ ಹೇಳಿರುವುದಾಗಿ ಹೇಳಿಕೊಂಡರು.
ನನಗೂ ಕನ್ನಡಕ ಧರಿಸಲು ಹೇಳಬಹುದು ಎಂದುಕೊಂಡು ಸಾಲಿನಲ್ಲಿ ನಿಂತೆ.
ನನ್ನ ಸರದಿ ಬಂತು. ಕೋಣೆಯ ಒಳ ಹೋದೆ.
ಅಲ್ಲೊಂದು ಕಣ್ಣಿನ ಪರೀಕ್ಷೆಯ ಉಪಕರಣವನ್ನು ಇಟ್ಟಿದ್ದರು.
ಅದರ ಒಂದು ತುದಿಯಲ್ಲಿ ಅವರು ಕೂತು, ಇನ್ನೊಂದು ತುದಿಯಲ್ಲಿ ನನ್ನನ್ನು ಕೂರಲು ಹೇಳಿದರು. (ಮೇಲಿನ ಚಿತ್ರದಲ್ಲಿ ಇರುವ ಹಾಗೆ).
ಆ ಉಪಕರಣದ ಒಂದು ತುದಿಯಲ್ಲಿ ಕಣ್ಣಿಟ್ಟು ನೋಡಲು ಹೇಳಿದರು. ಇನ್ನೊಂದು ತುದಿಯಲ್ಲಿ ಅವರು ನೋಡುತ್ತಿದ್ದರು.
ಅವರು ನೋಡುತ್ತಾ... "ಸರಿಯಾಗಿ ಕಣ್ಣಿಟ್ಟು ನೋಡ್ತಾ ಇದ್ದೀರಾ...?" ಎಂದು ಕೇಳಿದರು.
"ಹಾ ಸರ್, ನೋಡ್ತಾ ಇದೀನಿ" ಎಂದು ಹೇಳಿದೆ.
ಎರೆಡು ಮೂರು ಬಾರಿ ಹೀಗೆ ಕೇಳಿದರು.
"ನಾನು ನೋಡುತ್ತಲೇ ಇದ್ದೇನೆ" ಎಂದು ಹೇಳಿದೆ.
ಒಂದು ನಿಮಿಷ ಇನ್ನೊಂದು ತುದಿಯಿಂದ ನನ್ನ ಕಣ್ಣನ್ನು ನೋಡಿ, ಪರೀಕ್ಷಿಸಿದರು.
ನಂತರ... ಒಂದು ಚೀಟಿಯಲ್ಲಿ ಏನೋ ಅಂಕಿ ಬರೆದು ನನ್ನ ಕೈಯಿಗೆ ಇಟ್ಟರು.
ನಾನು "ಸರ್, ಕನ್ನಡಕ ಏನಾದ್ರು ಬೇಕಾಗುತ್ತ...?" ಎಂದೆ.
"ಏನು ಬೇಕಿಲ್ಲ ಹೋಗಿ" ಎಂದರು.
"ಎಸ್ಟಿದೆ ಸರ್..." ಎಂದೆ.
"ಎಷ್ಟು ಇಲ್ಲ ಹೋಗಿ" ಎಂದರು.
ಆ ಚೀಟಿಯನ್ನೊಮ್ಮೆ ತೆರೆದು ನೋಡಿದೆ. ಅದರಲ್ಲಿ ಒಂದು ದೊಡ್ಡ "೦" (ಸೊನ್ನೆ) ಬರೆದಿದ್ದರು. ಸ್ವಲ್ಪ ನಿರಾಸೆಯಲ್ಲೇ ಆ ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡು ಹೊರಬಂದೆ.
ಹೊರಗಡೆ ನಿಂತಿದ್ದ ಸ್ನೇಹಿತರೆಲ್ಲ ನನ್ನ ಕರೆದು... "ಎಸ್ಟಿದೆ ಮಗ...?" ಎಂದರು.
ತಾಪಸನೆ ಮಾಡಿದ ವೈದ್ಯರು ಕೊಟ್ಟ ಆ ಚೀಟಿಯನ್ನು ಅವರ ಕೈಗಿಟ್ಟೆ.
ಅದನ್ನು ನೋಡುತ್ತಾ.... "ಮಗ.. ನೀನು ಇಂಜಿನಿಯರಿಂಗ್'ನಲ್ಲಿ ಏನಾದ್ರು ಓದಿದಿಯೋ, ಇಲ್ವೋ.?... ಎಲ್ಲ ಸೆಮಿಸ್ಟರ್ ಓದಿ ಪಾಸಗಿದಿಯೋ ಅಥವಾ ಕಾಪಿ ಹೊಡೆದು ಪಾಸ್ ಆಗಿದಿಯಾ...?" ಎಂದು ಕೀಟಲೆ ಮಾಡಿದರು.

ನಿಮ್ಮೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
Share/Save/Bookmark

Sunday, December 20, 2009

ಹೇಳು

"ಹೇಯ್ ಶಿವ, ನಿನ್ನ G-Talk ನಲ್ಲಿ ಹಾಕಿರುವ status message ನ ಅರ್ಥವೇನು..?" ಎನ್ನುತ್ತಾ ನನ್ನ ಸಹೋದ್ಯೋಗಿ ಸ್ನೇಹ, ನನ್ನ ಡೆಸ್ಕ್ ಹತ್ರ ಬಂದಳು. ನಾನು ಯಾವುದೊ ಒಂದು ಸಾಲನ್ನು ಕನ್ನಡದಲ್ಲಿ ಗೀಚಿ ಹಾಕಿಕೊಂಡಿದ್ದೆ. ಅವಳು ಹೊರ ರಾಜ್ಯದವಳು. ಅವಳಿಗೆ ಕನ್ನಡ ಬರುವುದಿಲ್ಲ. ನಾನು ಯಾವುದೇ ಹೊಸ status message ಹಾಕಿದರೂ, ಅದರ ಅರ್ಥವೇನೆಂದು ಕೇಳಿ ತಿಳಿದುಕೊಳ್ಳುತ್ತಾಳೆ. ಹಾಗೆ, "ನನಗೆ ಕನ್ನಡ ಕಲಿಸು" ಎಂದು ಆಗಾಗ ಕೇಳುತ್ತಿರುತ್ತಾಳೆ. ಸಮಯವಿದ್ದಾಗಲೆಲ್ಲ ಸಾಮಾನ್ಯವಾಗಿ ಬಳಸುವ ಪದಗಳನ್ನು ಹೇಳಿಕೊಡುತ್ತಿರುತ್ತೇನೆ.
status message ನ ಅರ್ಥ ಹೇಳಿದೆ. ನಂತರ ಕನ್ನಡದಲ್ಲಿ ಇದಕ್ಕೆ ಏನು ಹೇಳಬೇಕು ?, ಅದಕ್ಕೆ ಏನು ಹೇಳಬೇಕು ? ಎಂದು ಪ್ರೆಶ್ನೆಗಳ ಸುರಿಮಳೆಗೈದಳು. ನಾನು ಎಲ್ಲವನ್ನು ಹೇಳುತ್ತಾ ಹೋದೆ.
"tell me" ಅನ್ನೋದನ್ನ ಕನ್ನಡದಲ್ಲಿ ಹೇಗೆ ಹೇಳ್ತಾರೆ..?
"ನನಗೆ ಹೇಳು" ಎನ್ನಬೇಕು ಎಂದೆ.
ಅವಳು ಅದನ್ನು.. "ನನಗೆ ಹೇಲು" ಎಂದಳು.
ನಗು ಬಂದರೂ, ನಿಯಂತ್ರಿಸಿಕೊಂಡು "ಛೆ ಛೆ ಛೆ.. ಅದನ್ನು ಹಾಗೆ ಹೇಳಬಾರದು. ಅದನ್ನು "ಹೇಳು" ಅಂತ ಹೇಳ್ಬೇಕು" ಅಂದೆ.
ಪುನಃ ಅವಳು "ಳ" ಎನ್ನುವ ಬದಲು "ಲ" ಎನ್ನುತ್ತಿದ್ದಳು.
ಅಸ್ಟರಲ್ಲಿ ಇನ್ನೊಬ್ಬ ಸಹೋದ್ಯೋಗಿ (ಕೇರಳದವನು) ಬಂದ.
ಅವನು ಕೂಡ "ಹೇಳು" ಅನ್ನುವ ಬದಲು "ಹೇಲು, ಹೇಲು" ಎಂದ.
ಅವರಿಬ್ಬರೂ ಎಷ್ಟು ಪ್ರಯತ್ನಿಸಿದರೂ, ಅವರ ಬಾಯಲ್ಲಿ "ಳ" ಬರಲೇ ಇಲ್ಲ.
ಕೊನೆಗೆ, ನನ್ನ ಪ್ರಯತ್ನಗಳೆಲ್ಲ ವಿಫಲವಾದಾಗ, "ದಯವಿಟ್ಟು ಈ ಪದವನ್ನು ಎಲ್ಲೂ ಉಪಯೋಗಿಸಬೇಡಿ" ಎಂದು ಕೈಮುಗಿದು ಬೇಡಿಕೊಂಡೆ. ಆಮೇಲೆ ಯಾರಾದರು ನನ್ನ "ಹೇಳಿಕೊಟ್ಟ ಗುರು ಯಾರು..?" ಎಂದು ಹುಡುಕಿಕೊಂಡು ಬಂದರೆ ಕಷ್ಟ ಅಲ್ವಾ..?. :(

Share/Save/Bookmark

Tuesday, December 1, 2009

ಮಾತು ಮಾತಲ್ಲಿ

ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.
ನನ್ನ ಸ್ನೇಹಿತ ಶಿವಪ್ರಸಾದ್ ಬಿ. ಎಂ, ತನ್ನ ಆಫೀಸಿನಿಂದ ನನಗೆ ಆಗಾಗ ಕರೆ ಮಾಡುತ್ತಿದ್ದ ಫೋನ್ ನಂಬರ್.
ನಾವಿಬ್ಬರು ಒಬ್ಬರಿಗೊಬ್ಬರು ಫೋನ್ ಮಾಡಿದರೆ, ಮೊದಲು ಸ್ವಲ್ಪ ತರ್ಲೆ ಮಾತುಗಳನ್ನಾಡಿ ನಂತರ ಕರೆ ಮಾಡಿದ ವಿಷಯಕ್ಕೆ ಬರೋದು.
ಸರಿ ಫೋನ್ ಎತ್ತಿ, 'ಹಲೋ' ಎಂದೆ.
ಆ ಕಡೆಯಿಂದ ನನ್ನ ಸ್ನೇಹಿತ, ಮೊದಲೇ ನಾ ಹೇಳಿದ ರೀತಿಯಲ್ಲಿ ತರ್ಲೆ ಮಾಡುತ್ತಾ ಇಂಗ್ಲೀಷಿನಲ್ಲಿ ಮಾತಾಡಿದ.. ಆ ಸಂಭಾಷಣೆ ಇಂಗ್ಲಿಷಿನಲ್ಲೇ ನಡಿತು.....
ಅದನ್ನು ಇಲ್ಲಿ ಕನ್ನಡದಲ್ಲಿ ಬರಿತ ಇದೀನಿ. ನಮ್ಮ ಸಂಭಾಷಣೆ ಹೀಗಿತ್ತು ನೋಡಿ.
"ಹಲೋ , ನಾನು ಶಿವಪ್ರಕಾಶ್ ಎನ್ನುವವರ ಜೊತೆ ಮಾತಾಡಬಹುದೇ....?" ಎಂದ ನನ್ನ ಗೆಳೆಯ ಶಿವಪ್ರಸಾದ್.
ಆಗ ನಾನು ಹೇಳಿದೆ : "ಇಲ್ಲ, ಸಾಧ್ಯವಿಲ್ಲ. ನೀವು ಅವರ ಜೊತೆ ಮಾತನಾಡಲು ಆಗುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ದೊಡ್ಡ ಬುಸ್ಸಿನೆಸ್ಸ್ ಮಗ್ನೆಟ್ (Business Magnet). ಅವರು ಈಗ ಬಿಲ್ ಗೇಟ್ಸ್ ಜೊತೆ ಮೀಟಿಂಗ್'ನಲ್ಲಿ ಇದಾರೆ. ಅವರ ಜೊತೆ ನೀವು ನೇರವಾಗಿ ಮಾತನಾಡಲು ಸಾಧ್ಯವಿಲ್ಲ. ನಾನು ಶಿವಪ್ರಕಾಶ್ ಅವರ ಸಹೋದರ. ಅವರು ಅಸ್ಟು ಸುಲಭವಾಗಿ ನಿಮಗೆ ಮಾತನಾಡಲು ಸಿಗುವುದಿಲ್ಲ. ಮೊದಲು ಅಪಾಯಿಂಟ್ಮೆಂಟ್ ತಗೋಳಿ. ನಂತರ ಸಂದರ್ಶಿಸಿ. ಏನಾದ್ರು ತುಂಬಾ ಮುಖ್ಯವಾದ ವಿಷಯ ಇದ್ರೆ ಹೇಳಿ. ಅವರಿಗೆ ಬಿಡುವು ಸಿಕ್ಕಾಗ ಹೇಳುತ್ತೇನೆ..' ಎಂದು ಅವನಿಗೆ ಮಾತಾಡಲು ಬಿಡದೆ ಒಂದೈದು ನಿಮಿಷ ಹೀಗೆ ಚನ್ನಾಗಿ ದಬಾಯಿಸಿದೆ.
ಅ ಕಡೆಯಿಂದ ನನ್ನ ಗೆಳೆಯ... "ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ಸರ್, ಅವರ ಜೊತೆ ಸ್ವಲ್ಪ ಮಾತನಾಡಬೇಕಿತ್ತು. ಅವರು ತಮ್ಮ Resume ಅನ್ನು Job Portal ನಲ್ಲಿಹಾಕಿದ್ದಾರೆ. ಅದಕ್ಕೆ ಹೊಂದುವ ಕೆಲಸ ನಮ್ಮ ಕಂಪನಿಯಲ್ಲಿ ಇತ್ತು. ಅದಕ್ಕೆ ಕರೆ ಮಾಡಿದಿವಿ ಸರ್...."
ಈ ಸಾರಿ ಮಾತಾಡಿದಾಗ ಅವನ ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಯಾಕೋ ಸಂದೇಹ ಬಂತು. ಮತ್ತೊಮ್ಮೆ ಕರೆಬಂದ ಸಂಕೆಯನ್ನು ಗಮನಿಸಿದೆ.
ಅಯ್ಯೋ... ಇವನು ನನ್ನ ಗೆಳೆಯನಲ್ಲ. ಅವನು ಫೋನ್ ಮಾಡಲು ಉಪಯೋಗಿಸುತ್ತಿದ್ದ ಫೋನ್ ನಂಬರಿಗೂ, ಇದಕ್ಕೂ ಸ್ವಲ್ಪವೇ ಸ್ವಲ್ಪ ವ್ಯತ್ಯಾಸವಿತ್ತು. ಬೇರೆ ಯಾರೋ ವ್ಯಕ್ತಿಗೆ, ಸುಮ್ಮನೆ ಸಿಕ್ಕಾಪಟ್ಟೆ ತಲೆ ತಿಂದು ಬಿಟ್ಟಿದ್ದೇನೆ. ಅಪರಿಚಿತ ವ್ಯಕ್ತಿಯೊಡನೆ ನಾನಾಡಿದ ಮಾತುಗಳನ್ನು ನೆನೆದು ನಗು ಬಂತು.
ಮಾಡಿದ ತಪ್ಪಿಗೆ, ಕ್ಷಮೆ ಕೇಳಿ ಫೋನ್ ಇಟ್ಟೆ.

ಗೆಳೆಯರೇ ಹಾಗು ಗೆಳತಿಯರೇ (ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ.... ಸ್ವಲ್ಪ ಜಾಸ್ತಿ ಆಯ್ತು ಅಲ್ವಾ...?),
ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು(ಕೈಯಿಟ್ಟು), ಒಂದು ವರ್ಷವಾಗುತ್ತ ಬಂತು.
ನೀವು ನನ್ನನ್ನು ಹಾಗು ನನ್ನ ಲೇಖನಗಳನ್ನು ಪ್ರೋತ್ಸಾಹಿಸುತ್ತಾ ಬಂದಿದಿರಿ.
ನಿಮ್ಮ ಸಹಕಾರ ಹೀಗೆ ಇರವುದೆಂದು ಆಶಿಸುತ್ತೇನೆ.

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
Share/Save/Bookmark

Tuesday, November 24, 2009

ನಾವು, ನಮ್ಮ ಡ್ಯಾನ್ಸ್

ನಾನು ಸ್ನೇಹ. ಕೊನೆಯ ವರ್ಷದ BBM ಓದ್ತಾ ಇದೀನಿ. ಮೊನ್ನೆ ತಾನೇ ಕಾಲೇಜ್'ನ ವಾರ್ಷಿಕೋತ್ಸವ ನಡಿತು. ನಾನು, ನನ್ನ ಇಬ್ಬರು ಗೆಳತಿಯರು ವಾರ್ಷಿಕೋತ್ಸವ ಸಮಾರಂಭಕ್ಕೆ ಡ್ಯಾನ್ಸ್ ಪ್ರೊಗ್ರಾಮ್ ಕೊಟ್ಟಿದ್ವಿ. ನಮ್ಮ ಕಾಲೇಜ್'ನ ಕೆಲವು ಶಿಕ್ಷಕರು, ನಾವು ಮಾಡಿದ ಡ್ಯಾನ್ಸ್ ಮೆಚ್ಚಿ ಅಭಿನಂದಿಸಿದ್ದರು. ಅದನ್ನೇ ನೆನಪಿಸಿಕೊಳ್ಳುತ್ತಾ ಕ್ಲಾಸಿನಲ್ಲಿ ಕೂತಿದ್ದೆ. ಆಗ ನಮ್ಮ ಕಾಲೇಜ್'ನ ಪ್ರಾಂಶುಪಾಲರ ಸಹಾಯಕ, ನಮ್ಮ ಕ್ಲಾಸ್ನಲ್ಲಿ ಬಂದು, ನಮ್ಮ ಮೂವರ ಹೆಸರನ್ನು ಕೂಗಿ, 'ಪ್ರಾಂಶುಪಾಲರು ಕರಿತಾ ಇದಾರೆ ಬನ್ನಿ' ಅಂದ.
ಇದುವರೆಗೆ ಎಂದೂ ಕರೆಯದ ಪ್ರಾಂಶುಪಾಲರು ಇಂದೇಕೆ ಕರಿತಾ ಇದಾರೆ ಎನ್ನುವ ಆಶ್ಚರ್ಯವಾಯ್ತು. ನಾವು ಮೂವರು ಪ್ರಾಂಶುಪಾಲರ ಕಚೇರಿಗೆ ಹೋಗಿ. ಬಾಗಿಲ ಹತ್ರ ನಿಂತು... 'ಸರ್' ಎಂದೆವು.
ಪ್ರಾಂಶುಪಾಲರು 'Come in' ಅಂದ್ರು.
ನಾವು ಒಳಗಡೆ ಹೋಗಿ, ಅವರ ಎದುರಲ್ಲಿ ನಿಂತೆವು.
ಅವರು ಮಾತು ಶುರು ಮಾಡುತ್ತಾ 'ನಿಮ್ಮಿಂದ ಕಾಲೇಜ್'ಗೆ ಮೂರು ಸಾವಿರ ನಸ್ಟ ಆಗಿದೆ. ಅದನ್ನು ನೀವೇ ಭರಿಸಬೇಕು. ಆ ಫೈನ್ ಕಟ್ಟಿ ಅಂತ ಹೇಳೋದಕ್ಕೆ ಕರೆದೆ' ಎಂದರು
ನಮಗೆ ಭಯ ಆಯ್ತು. ನಾವು ಯಾವುದೇ ತಪ್ಪು ಮಾಡಿಲ್ಲ. ಭಯದಲ್ಲೇ...'ನಾವು ಏನು ಮಾಡಿದ್ವಿ ಸರ್...?' ಎಂದೆವು.
ಪ್ರಾಂಶುಪಾಲರು ಗತ್ತಿನಿಂದಲೇ 'ಏನ್ ಮಾಡಿದ್ವಿ ಅಂತ ಕೇಳ್ತೀರಾ... ನಿಮಗೆ ಗೊತ್ತಿಲ್ವೆ...?... ನಿಮ್ಮಿಂದ ಹತ್ತು ಕುರ್ಚಿಗಳು ಹಾಳಗಿದವೇ. ಅದರಿಂದ ಕಾಲೇಜ್'ಗೆ ಮೂರು ಸಾವಿರ ನಸ್ಟ ಆಗಿದೆ...' ಎಂದರು.
'ನಾವು ಯಾವುದೇ ಕುರ್ಚಿಯನ್ನು ಹಾಳುಮಾಡಿಲ್ಲ ಸರ್' ಎಂದೆವು.
'ನೀವೇ ಮಾಡಿದ್ದು.. ಮೊನ್ನೆ ನೀವು ಮಾಡಿದ ಡ್ಯಾನ್ಸ್ ನಿಂದ ಹುಡುಗರೆಲ್ಲ ಕುಣಿದಾಡಿ, ಕುರ್ಚಿಗಳನ್ನೆಲ್ಲಾ ಹಾಳುಮಾಡಿದ್ದಾರೆ. ಆದಕಾರಣ ಇದರ ನಷ್ಟಕ್ಕೆ ನೀವೇ ಜವಾಬ್ದಾರರು..' ಎಂದು ಹೇಳಿ ನಕ್ಕರು.
ಅವರ ಮಾತಿಗೆ ನಾವು ಒಳಗೊಳಗೇ ನಕ್ಕೆವು.
ನಂತರ ಪ್ರಾಂಶುಪಾಲರು ನಮ್ಮನ್ನು ಅಭಿನಂದಿಸಿ ಕಳಿಸಿದರು.

ಅಂದಹಾಗೆ, ಪ್ರಾಂಶುಪಾಲರು ಆದ ಮಾತ್ರಕ್ಕೆ ಜೋಕ್ ಮಾಡಬಾರದು ಅಂತ ರೂಲ್ಸ್ ಏನಾದ್ರು ಇದೆಯಾ... :P ?

ಈ ಲೇಖನ, ನೈಜ ಘಟನೆಯನ್ನು ಆಧರಿಸಿ ಬರೆಯಲಾಗಿದೆ. :D
Share/Save/Bookmark

Tuesday, November 17, 2009

ಪ್ರತಿಕ್ರಿಯೆ

ನಾವು ಯಾವುದೇ ಒಂದು ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲಿ/ಸೋಲಾಗಲಿ ಅನುಭವಿಸಿದಾಗ, ನಮ್ಮ ಹಿತೈಷಿಗಳ ಶುಭಾಶಯಗಳು/ಸಮಾಧಾನದ ನುಡಿಗಳು ನಮ್ಮಲ್ಲಿ ಏನೋ ಒಂದು ಹೊಸ ಚೇತನವನ್ನು ಮೂಡಿಸುತ್ತವೆ. ನಮ್ಮನ್ನು ಹುರಿದುಂಬಿಸುತ್ತವೆ.
ಹೀಗೆ, ನಮ್ಮ ಲೇಖನಗಳನ್ನು ಯಾರಾದರು ಓದಿ, ಅವನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದಾಗ ತುಂಬಾ ಕುಶಿಯಗುತ್ತೆ.
ಕೆಲವೊಮ್ಮೆ ಕೆಲವೊಂದು ಪ್ರತಿಕ್ರಿಯೆಗಳು ಆಶ್ಚರ್ಯವನ್ನು ಮೂಡಿಸುತ್ತವೆ.
ನಾನು ಕೆಲವು ತಿಂಗಳುಗಳ ಹಿಂದೆ ಹದಿನಾರು ಎನ್ನುವ ಲೇಖನವನ್ನು ಬರೆದಿದ್ದೆ. ಆ ಲೇಖನ ಓದಿರದಿದ್ದರೆ, ಅದನ್ನು ಮೊದಲು ಓದಿ, ನಂತರ ಈ ಲೇಖನವನ್ನು ಮುಂದುವರೆಸಿ. ಇಲ್ಲದಿದ್ದರೆ ಈ ಲೇಖನಕ್ಕೆ ಸ್ವಲ್ಪ ಸ್ವಾರಸ್ಯವಿರುವುದಿಲ್ಲ.
ನನ್ನ ಆ ಲೇಖನಕ್ಕೆ ಕ್ಷಣ ಚಿಂತನೆ: ಚಿಂತನಾಲಹರಿ... ಬ್ಲಾಗಿನ ಚಂದ್ರಶೇಖರ ಅವರು ಒಂದು ಪ್ರತಿಕ್ರಿಯೆಯನ್ನು ಬರೆದಿದ್ದರು.
ಅವರ ಪ್ರತಿಕ್ರಿಯೆ ಹೀಗಿತ್ತು ನೋಡಿ.......

`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.
ನಾವು ಹಂಪಿಗೆ ಸುಮಾರು ವರ್ಷಗಳ ಹಿಂದೆ ಹೋಗಿದ್ದೆವು. ನಾನು ಬೆಂಗಳೂರು ಬಿಟ್ಟು ಶಿವಮೊಗ್ಗೆವರೆಗೆ ಮಾತ್ರ ಹೋಗಿದ್ದೆ. ಇದೇ ಮೊದಲ ಬಾರಿ ಹಂಪಿ, ಬಳ್ಳಾರಿ ಕಡೆ ಹೋಗಿದ್ದು. ಅಲ್ಲಿ ಒಂದು ಊರ ಹೆಸರು `ಕುಡಿತಿನಿ' ಅಂತಿತ್ತು. ಈ ಊರಿನ ಹೆಸರನ್ನು ನಮಗೆ ನಾವೇ ಹೇಳಿಕೊಂಡರೆ ಹೇಗೆ? ಅನ್ನಿಸಿತ್ತು.
ಸಸ್ನೇಹಗಳೊಂದಿಗೆ,

ಅವರ ಪ್ರತಿಕ್ರಿಯೆಯಲ್ಲಿ ಬರೆದ `ಕುಡಿತಿನಿ' ಎನ್ನುವ ಊರಿನ ಹೆಸರು ತುಂಬಾ ವಿಚಿತ್ರವಾಗಿದೆ ಅಲ್ವಾ...?
ಅದನ್ನು ಕೇಳಿ ನಿಮಗೆ ನಗು ಬಂದಿರಬೇಕು ಅಲ್ವಾ.... ?
ನಗುವ ಮುಂಚೆ ನಾನು ಹೇಳುವುದನ್ನೊಮ್ಮೆ ಕೇಳಿ...
ಇದು ನನ್ನ ಸ್ವಂತ ಊರಿನ ಹೆಸರು... ನಾನು ಹುಟ್ಟಿ ಬೆಳದ ಊರು. ಈಗಲೂ ಅದು ನನ್ನೂರು. :)
ಈಗ ನೀವು ನಗಬಹುದು... ಹ್ಹಾ ಹ್ಹಾ ಹ್ಹಾ...

ನಮ್ಮ ಊರಿನ ಹೆಸರನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕರಿಯುತ್ತಾರೆ.
ಒಬ್ಬರು 'ಕುಡತಿನಿ', ಇನ್ನೊಬ್ಬರು 'ಕುಡಿತಿನಿ', ಹಾಗೆ ಇನ್ನೂ ಕೆಲವರು 'ಕುಡ್ತಿನಿ' ಎನ್ನುತ್ತಾರೆ.
ಯಾವುದೇ ರೀತಿಯಲ್ಲಿ, ನಮ್ಮ ಊರಿನ ಹೆಸರನ್ನು ಕರೆದರೂ ನಿಮಗೆ ತಮಾಷೆಯಾಗಿಯೇ ಕಾಣಿಸುತ್ತದೆ.




Share/Save/Bookmark

Thursday, November 12, 2009

ಕುಲನಾಮ (Surname)

ಅಂದು ರಮೇಶ್, ಇಟಲಿಯಲ್ಲಿರುವ ರಾಬರ್ಟೊ ಎನ್ನುವ ವ್ಯಕ್ತಿಯೊಡನೆ ಚಾಟ್ (text - chat) ಮಾಡುತ್ತಿದ್ದ.
ನಾನು, ರಮೇಶ್, ಸತೀಶ್, ರಾಬರ್ಟೊ ಹಾಗು ಇನ್ನೂ ಹತ್ತಾರು ಜನ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋದು.
ಹೀಗೆ ಚಾಟ್ ಮಾಡುತ್ತಿರುವಾಗ ರಾಬರ್ಟೊ, ರಮೇಶನಿಗೆ ... 'ನಾನು ನಿನ್ನ ಒಂದು ವಯ್ಯುಕ್ತಿಕ ವಿಷಯ ಕೇಳಬಹುದೇ...?' ಎಂದ..
'ಹಾ, ಕೇಳು ರಾಬರ್ಟೊ... ಅದರಲ್ಲೇನಿದೆ...' ಎಂದ ರಮೇಶ್.
'ಸತೀಶ್... ನಿನ್ನ ಸಹೋದರನೆ.... ?' .
ಸತೀಶ್ ನಮ್ಮ ಸಹದ್ಯೋಗಿ, ಸಹೋದರನಲ್ಲ. ಆದರೆ ನಮ್ಮ ರಮೇಶನಿಗೆ, ರಾಬರ್ಟೊ ಹಾಗೆ ಯಾಕೆ ಕೇಳಿದ ಎಂದು ಅರ್ಥವಾಗಲಿಲ್ಲ. ಅವನಿಗೆ ಈ ಥರ ಆಲೋಚನೆ ಯಾಕೆ ಬಂದಿರಬಹುದು..? ಎಂದು ಆಲೋಚಿಸಿದ. ತಿಳಿಯಲಿಲ್ಲ. ಯಾಕಿರಬಹುದು ಎಂದು ಆಲೋಚಿಸುತ್ತಲೇ, ಒಂದು ಸಂದೇಶ ಕಳಿಸಿದ...
'ಯಾಕೆ ರಾಬರ್ಟೊ, ಆ ತರಹದ ಆಲೋಚನೆ ಬಂತು...?'
'ಇಲ್ಲ, ಇಬ್ಬರ Surname (ಕುಲನಾಮ) ಒಂದೇ ಇದೇ ಅಲ್ವಾ... ಅದೇ "ಕುಮಾರ್"...ಅಂತ.. "ರಮೇಶ್ ಕುಮಾರ್", "ಸತೀಶ್ ಕುಮಾರ್" ಅದಕ್ಕೆ ಹಾಗೆ ಕೇಳಿದೆ ' ಅಂದ.
ನಮ್ಮ ರಮೇಶ್, ಇದನ್ನು ಹೇಗೆ ವಿವರಿಸಿ ಹೇಳಬೇಕು ಎಂದು ಆಲೋಚಿಸುತ್ತ ನನ್ನ ಕೇಳಿದ.
ನಾನು ಇವರಿಬ್ಬರ ಸಂದೇಶಗಳನ್ನು ಓದಿದೆ. ಸ್ವಲ್ಪ ಆಲೋಚಿಸಿ ಅವರಿಗೆ ಹೀಗೆ ಸಂದೇಶ ಕಳಿಸಿದೆ...
'..."ಕುಮಾರ್" ಎನ್ನುವುದು ಕುಲನಾಮವಲ್ಲ...
ಕುಮಾರ ಎಂದರೆ ನಿಮ್ಮ ಭಾಷೆಯಲ್ಲಿ Son (ಮಗ) ಎಂದು ಅರ್ಥ..
ಇನ್ನೂ ರಮೇಶ್, ಸತೀಶ್ ಎನ್ನುವ ಹೆಸರುಗಳು, ದೇವರ ಹೆಸರುಗಳು..
ನಾವೆಲ್ಲರೂ ದೇವರ ಮಕ್ಕಳಿದ್ದಂತೆ ಅಲ್ಲವೇ...
ಹಾಗಾಗೆ ದೇವರ ಹೆಸರಿನ ಪಕ್ಕ "ಕುಮಾರ್" ಎಂದು ಸೇರಿಸಿ ಹೆಸರಿಡುತ್ತಾರೆ...
ನಿಮ್ಮಲ್ಲಿ ... ಜಾನ್ಸನ್(Johnson), ಪೀಟರ್ಸನ್ (Peterson) ಹೇಗೋ ಹಾಗೆ...' ಎಂದು ಕಳಿಸಿದೆ...
ಆಗ ರಾಬರ್ಟೊ...'ಒಹ್... ಹಾಗಾ...' ಎಂದು ಅವರ ಕೆಲವು ಹೆಸರುಗಳ ಉದಾಹರಣೆಗಳನ್ನು ಕೊಟ್ಟ.
ನಾನು, ರಮೇಶ ಒಳಗೊಳಗೇ ನಕ್ಕೆವು.
Share/Save/Bookmark

Monday, November 2, 2009

ಅಂಡರ್ಲೈನ್

ಕಾಲೇಜಿನ ಮೆಟ್ಟಿಲು ಏರಿ ಕೇವಲ ಒಂದು ತಿಂಗಳಸ್ಟೇ ಕಳದಿತ್ತು. ಕಾಲೇಜಿನಲ್ಲಿ ನಮ್ಮಂತ ಹುಡುಗರು ಹರಟೆ ಹೊಡಿತ ಕೂಡೋಕೆ ಒಂದು ಕಟ್ಟೆ ಇತ್ತು. ಹರಟೆ ಕಟ್ಟೆ ಅನ್ಕೊಲಿ. ನಾನು, ನನ್ನ ಗೆಳೆಯ ಮಂಜು ಕಟ್ಟೆಮೇಲೆ ಹರಟುತ್ತ ಕೂತಿದ್ವಿ. ದೂರದಲ್ಲಿ ನನ್ನ ಇನ್ನೊಬ್ಬ ಗೆಳೆಯ ಶಿವು(ಶಿವಪ್ರಸಾದ್ ರೆಡ್ಡಿ), ನಮ್ಮ ಕ್ಲಾಸಿನ ಒಂದು ಸುಂದರವಾದ ಹುಡುಗಿ ಸ್ನೇಹ ಜೊತೆ ಮಾತಾಡ್ತಾ ನಿಂತಿದ್ದ. ಮಾತಾಡ್ತಾ ಇದ್ದ ಅನ್ನೋದಕ್ಕಿಂತ ಕಿರುಚಾಡ್ತಾ ಇದ್ದ ಅಂತಾನೆ ಹೇಳಬಹುದು. ಒಂದೇ ಸಮನೆ ಸ್ನೇಹಳನ್ನು ಬೈಯುತ್ತಿದ್ದ. ಯಾವ ವಿಷಯಕ್ಕೆ ಸಂಬಂದಿಸಿ ಸ್ನೇಹಳನ್ನು ಬಯ್ತಾ ಇದನೋ ಅಂತ ಮಂಜನ ಕೇಳಿದೆ. ಮಂಜನಿಗೂ ಗೊತ್ತಿರ್ಲಿಲ್ಲ.
'ಏನಾದ್ರು ಲವ್ ಗಿವ್ ಮಾಡ್ತಾ ಇದಾರ....' ಅಂತ ಮಂಜನ ಕೇಳಿದೆ.
'ನನಗೆ ಗೊತ್ತಿರುವ ಹಾಗೆ, ಲವ್ ಗಿವ್ ಏನು ಇಲ್ಲ ಕಣೋ' ಎಂದ ಮಂಜ.
ಮತ್ತೆ ಯಾಕೆ ಬೈತ ಇರಬಹುದು...? ಎಂದು ತೆಲೆಕೆಡಸಿಕೊಳ್ಳುತ್ತಿರುವಾಗ, ನಮ್ಮ ಶಿವು ನಮ್ಮಲ್ಲಿಗೆ ಬಂದ. ಆ ಹುಡುಗಿ ಕಣ್ಣಿರನ್ನು ತನ್ನ ವೆಲಿನಿಂದ ವರೆಸಿಕೊಳ್ಳುತ್ತ ಕ್ಲಾಸಿನೊಳಗೆ ಹೋದಳು. ನನ್ನ ಮನಸು ಸ್ವಲ್ಪ ಕರಗಿತು. ಎಸ್ಟೆ ಆಗ್ಲಿ ನನ್ನಂತ ಹುಡುಗರ ಮನಸು ತುಂಬಾ ಮೃದು ಅಲ್ವಾ..?.
ನಾನು ಕೇಳಿದೆ.. 'ಯಾಕೋ ಸ್ನೇಹಾನ ಅಸ್ಟೊಂದು ಬೈತಾ ಇದ್ದೆ..?'
'ಹೋಗ್ಲಿ ಬಿಡೋ, ಅದನ್ಯಾಕೆ ಕೇಳ್ತಿಯಾ....' ಎಂದ.
'ಏನ್ ಹೇಳೋ...'
'ಅವಳು ನನ್ನ ನೋಟ್ಸ್ ಕೇಳಿದ್ಲು, ಕೊಟ್ಟಿದ್ದೆ...' ಎಂದ.
(ನಮ್ಮ ಕ್ಲಾಸಿನಲ್ಲಿ ಲೆಕ್ಚರರ್ ಪಾಠ ಮಾಡುತ್ತಾ ನೋಟ್ಸ್ ಬರಿಸ್ತಾ ಇದ್ರು. ನಾವು ಅವರು ಹೇಳುವ ವೇಗದಲ್ಲಿ ಬರೆದುಕೊಳ್ಳಲು ಆಗುತ್ತಿರಲಿಲ್ಲ. ಮದ್ಯ ಮದ್ಯ ಜಾಗ ಕಾಲಿ ಬಿಟು ಬಿಟ್ಟು ಬರೆದುಕೊಳ್ಳುತ್ತಿದ್ದೆವು. ಆದರೆ ನಮ್ಮ ಶಿವು, ಲೆಕ್ಚರರ್ ಎಸ್ಟೆ ವೇಗವಾಗಿ ಹೇಳಿದರೂ ಬರೆದುಕೊಳ್ಳುತ್ತಿದ್ದ. ನಾವು, ನಂತರ ಅವನ ನೋಟ್ಸ್ ತಗೊಂಡು ಜಾಗ ಕಾಲಿ ಬಿಟ್ಟಿದ್ದ ಸ್ಥಳಗಳಲ್ಲಿ ಭರ್ತಿ ಮಾಡಿಕೊಳ್ಳುತ್ತಿದ್ದೆವು.).
'ಅದಕ್ಕೆ ಏನಾಯ್ತೋ ಈಗ........?' ಎಂದೆ.
'ಕ್ಲಾಸ್ನಲ್ಲಿ ಲೆಕ್ಚರ್ ಸ್ಪೀಡ್ ಆಗಿ ನೋಟ್ಸ್ ಹೇಳುವುದನ್ನು, ನಾನು ಬರೆದುಕೊಳ್ಳುವಾಗ ನೋಟ್ಸ್'ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ (Spelling mistake) ಮಾಡಿದ್ದೆ...' ಎಂದ.
'ಅದಕ್ಕೆ ಏನಾಯ್ತು.... ?'
'ಅವಳು ನನ್ನ ನೋಟ್ಸ್ ತೆಗೆದುಕೊಂಡಿದ್ದಳು ಅಲ್ವಾ... ನಾನು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಪದಗಳಿಗೆಲ್ಲ ಪೆನ್ಸಿಲ್'ನಲ್ಲಿ ಕೆಳಗೆ ಅಂಡರ್ಲೈನ್ (Underline) ಮಾಡಿದಾಳೆ'.
'ಒಹ್ ಅಸ್ಟೆನಾ...? ಅದಕ್ಕೆ ಅವಳಿಗೆ ಅಸ್ಟೊಂದು ಬೈಯೋದ......?' ಎಂದು ಕೇಳಿದೆ.
'ಆದರೆ ಏನ್ ಮಾಡೋದು, ನೋಟ್ಸಿನಲ್ಲಿ ನಾನು ಬರೆದಿರುವುದಕ್ಕಿಂತ ಅವಳ Underlines ಜಾಸ್ತಿ ಇದಾವೆ...ಪ್ರತಿಯೊಂದು ಪದಕ್ಕೂ ಅಂಡರ್ಲೈನ್ ಮಾಡಿದಾಳೆ ' ಎಂದ ಸಂಕಟದಲ್ಲಿ ಹೇಳಿದ.
ನಾನು, ಮಂಜ ಇದನ್ನು ಕೇಳಿ ಬಿದ್ದು ಬಿದ್ದು ನಕ್ಕೆವು.


Share/Save/Bookmark

Tuesday, October 27, 2009

ಪಾಪ ಉಲ್ಲಾಸ

ನಿಮಗೆ ಹಿಂದೊಮ್ಮೆ ಸವಾರಿ ಲೇಖನದಲ್ಲಿ ಉಲ್ಲಾಸನ ಆವಾಂತರವನ್ನು ಹೇಳಿದ್ದೆ. ಈಗ ನಮ್ಮ ಅದೇ ಉಲ್ಲಾಸನ ಇನ್ನೊಂದು ನೆನಪಿನ ಪುಟ ನಿಮಗಾಗಿ.
ಉಲ್ಲಾಸ್ ಗುಲ್ಬರ್ಗದಲ್ಲಿ ಓದುತ್ತಿರುವಾಗ, ಅಲ್ಲೇ ವಾಸವಾಗಿದ್ದ ತನ್ನ ಹಳೆಯ ಸಂಬಂಧಿಕರ ಮನೆಗೆ ಮಾತನಾಡಿಸಲು, ಮೊದಲ ಬಾರಿ ಅವರ ಮನೆಗೆ ಹೋದ. ಅವರು ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಇಂದು ಇಲ್ಲೇ ಊಟ ಮಾಡಿ ಹೋಗು ಎಂದು ಬಲವಂತ ಮಾಡಿದರು. ನಮ್ಮ ಉಲ್ಲಾಸನಿಗೂ ದಿನಾಲೂ ಹೋಟೆಲ್ ಊಟ ಮಾಡಿ ಬೇಸರವಾಗಿತ್ತು. ಸರಿ ಆಯ್ತು ಮಾಡಿ ಹೋಗ್ತೀನಿ ಎಂದು ಹೇಳಿದ.
ಬಿಸಿ ಬಿಸಿ ಆಡುಗೆ ಸಿದ್ದ ಮಾಡಿದರು. ಅವರೆಲ್ಲರ ಜೊತೆ ನಮ್ಮ ಉಲ್ಲಾಸ ಊಟಕ್ಕೆ ಕೂತ. ಮೊದಲು ರೊಟ್ಟಿ ಪಲ್ಯ ಊಟ. ನಮ್ಮ ಉಲ್ಲಾಸನಿಗೆ ರೊಟ್ಟಿ ತಿನ್ನೋ ಅಭ್ಯಾಸ ಇರ್ಲಿಲ್ಲ. ಆದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಅವರ ಮನೆಯವರು ಮುಂದಾದರು. ಆದರೆ ಅನ್ನ ಸ್ವಲ್ಪ ಸೀದಿಹೊಗಿತ್ತು (ಒತ್ತಿ ಹೋಗಿತ್ತು, ಒತ್ತಿತ್ತು). ಅವರ ಮನೆಯವರು ಉಲ್ಲಾಸನಿಗೆ ಅನ್ನ ಸೀದಿರುವ ಸಂಗತಿ ಹೇಳಿ, ಕ್ಷಮೆ ಕೇಳಿ, ರೊಟ್ಟಿನೆ ತಗೋಳಿ ಎಂದರು. ನಮ್ಮ ಉಲ್ಲಾಸನಿಗೆ ಅನ್ನ ತಿನ್ನದೇ ಇದ್ದರೆ, ಊಟ ಮಾಡಿದ ಹಾಗೆ ಆಗುವುದಿಲ್ಲ. ಮೊದಲೇ ರೊಟ್ಟಿ ತಿನ್ನುವ ಅಭ್ಯಾಸವಿಲ್ಲ. ಅನ್ನ ಸೀದಿದ್ದರು ಸರಿ, ಅದನ್ನೇ ತಿನ್ನೋಣ ಎಂದು ಮನಸ್ಸಿನಲ್ಲಿ ಅಂದುಕೊಂಡು, ಅವರಿಗೆ ಒಂದು ಸುಳ್ಳು ಹೇಳಿದ.
'ನನಗೆ ಸೀದಿರುವುದೆಂದರೆ ತುಂಬಾ ಇಷ್ಟ, ನನಗೆ ಅದನ್ನೇ ಬಡಿಸಿ' ಎಂದ.
ಅವರ ಮನೆಯವರು ಸ್ವಲ್ಪ ನಿಟ್ಟುಸಿರು ಬಿಟ್ಟು, ಅದನ್ನೇ ಬಡಿಸಿದರು. ನಮ್ಮ ಉಲ್ಲಾಸ ಸ್ವಲ್ಪ ಕಷ್ಟ ಪಟ್ಟು ಊಟ ಮಾಡಿದ. ಊಟವಾದ ನಂತರ ಅವರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ.

೨ ವರ್ಷಗಳ ನಂತರ.........

ಮತ್ತೊಮ್ಮೆ ನಮ್ಮ ಉಲ್ಲಾಸನಿಗೆ, ಅವರ ಮನೆಗೆ ಹೊಗಿಬರಬೇಕಾದ ಪ್ರಸಂಗ ಬಂತು. ಮತ್ತೊಮ್ಮೆ ಅವರ ಮನೆಗೆ ಹೋದ.
'ಇಲ್ಲೇ ಓದ್ತಾ ಇದ್ರು, ಅವಾಗವಾಗ ಮನೆಗೆ ಬರ್ತಾ ಇರಬಾರದ.. ?' ಎಂದು ಅವರ ಮನೆಯವರು ಕೇಳಿ, ಮತ್ತೊಮ್ಮೆ ಅತ್ಮಿಯತೆಯಿಂದ ಮಾತನಾಡಿಸಿದರು. ಬಂದ ಕೆಲಸವಾದ ನಂತರ, ನಾನು ಹೋಗಿಬರ್ತೀನಿ ಎಂದು ಹೇಳಿ, ಎದ್ದು ನಿಂತ.
'ಹೇ, ಕೂತ್ಕೊಳೋ, ಊಟ ಮಾಡ್ಕೊಡು ಹೋಗು...' ಎಂದರು.
ಬೇಡವೆಂದರೂ, ಬಲವಂತ ಮಾಡಿದರು. ನಮ್ಮ ಉಲ್ಲಾಸ ಅವರೆಲ್ಲರ ಜೊತೆ ಊಟಕ್ಕೆ ಕೂತ. ಮತ್ತದೇ ರೊಟ್ಟಿ ಪಲ್ಯ. ಇಷ್ಟವಿಲ್ಲದಿದ್ದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಮುಂದಾದರು..
ನಮ್ಮ ಉಲ್ಲಾಸನದು, ಏನು ಕೆಟ್ಟ ಹಣೆಬರಹವೋ ಏನೋ... ಇವತ್ತು ಕೂಡ ಅನ್ನ ಸೀದಿತ್ತು...
ಅದನ್ನು ಗಮನಿಸಿದ ಮನೆಯವರು 'ಅನ್ನ ಸೀದಿದೆ...' ಎಂದರು.
ಅವರ ಮನೆಯಲ್ಲಿರುವ ಇನ್ನೊಬ್ಬ ವ್ಯಕ್ತಿ... 'ಒಹ್, ಅನ್ನ ಸೀದಿದೆಯ... ? ನಮ್ಮ ಉಲ್ಲಾಸನಿಗೆ ಸೀದಿರೋದು ಅಂದ್ರೆ ತುಂಬಾ ಇಷ್ಟ. ಅವನಿಗೆ ಬಡಿಸಿ...' ಎಂದರು.
ನಮ್ಮ ಉಲ್ಲಾಸ ಮನದಲ್ಲೇ ಕೊರಗಿದ. ಅವತ್ತು ನಾನು ಹೇಳಿದ ಸುಳ್ಳಿನಿಂದ ಇವತ್ತು ಕೂಡ ನನಗೆ ಸೀದಿರುವ ಊಟ... :(
ಆ ಮನೆಯವರು ನಮ್ಮ ಉಲ್ಲಾಸನಿಗೆ ಸೀದಿರುವುದು ಇಷ್ಟವೆಂದು ತಿಳಿದ ಬಳಿದ, ಕೆಳಗೆ ಸೀದಿರುವುದನ್ನೆಲ್ಲ ಹುಡುಕಾಡಿ ಬಡಿಸಿದರು.
ಪಾಪ, ನಮ್ಮ ಉಲ್ಲಾಸನಿಗೆ ಬೇರೆ ದಾರಿಯಿಲ್ಲದೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ತಿಂದ..
Share/Save/Bookmark

Monday, October 12, 2009

ಸಾಗುತ ದೂರ ದೂರ...



ಮೂರು ವರ್ಷಗಳ ಹಿಂದೆ ನಡೆದ ಘಟನೆ.
ನಾನು ಹಾಗು ನಟ ಇಬ್ಬರು ಸೇರಿ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಬೇಕಾಗಿತ್ತು. ಬಳ್ಳಾರಿ ಹತ್ತಿರ ಇರುವ 'ಕುಡತಿನಿ' ನನ್ನ ಊರು. ಆದರೆ ನಾವು ಹೋಗುತ್ತಿದ್ದುದು ಬೇರೆ ಕೆಲಸದ ನಿಮಿತ್ತ. ಅಲ್ಲಿ ಸ್ವಲ್ಪ ಸುತ್ತುವ ಕೆಲಸಗಳಿದ್ದರಿಂದ, ತಿರುಗಾಡಲು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದರೆ ಒಳಿತು ಎಂದು ನಿರ್ಧರಿಸಿದೆವು. ೩೦೦ ಕಿಲೋಮೀಟರುಗಳ ಪ್ರಯಾಣವನ್ನು ಬೈಕಿನಲ್ಲೇ ಮಾಡಲು ಸಜ್ಜಾದೆವು. ಜೀವನದಲ್ಲಿ ಮೊದಲಬಾರಿಗೆ, ಬೈಕಿನಲ್ಲಿ ಇಷ್ಟು ದೂರದ ಪ್ರಯಾಣ ಮಾಡ್ತಾ ಇರೋದು. ಬೆಂಗಳೂರನ್ನು ಬೆಳಗಿನಜಾವ ಬಿಡುವ ಯೋಚನೆ ಮಾಡಿದ್ರು. ಕೆಲವು ಸಣ್ಣ ಪುಟ್ಟ ಕೆಲಸಗಳು ಇದ್ದುದರಿಂದ, ನಾವು ಬಿಡುವುದು ತಡವಾಯಿತು. ನಾವು ಬೆಂಗಳೂರು ಬಿಟ್ಟಾಗ ಮಧ್ಯಾನ ೪ ಗಂಟೆ. ಬೆಂಗಳೂರು ದಾಟುವುದರೊಳಗೆ ಒಂದು ಗಂಟೆ ಜಾರಿ ಹೋಯಿತು. ನಾವು ತುಮಕೂರು ಸೇರಿದಾಗ ಸಮಯ ಸಂಜೆ ೬ ಗಂಟೆ.

ಆಗಸದ ಸೂರ್ಯನಿಗೆ ಅವತ್ತು ಏನು ಕೆಲಸವಿತ್ತೇನೋ..?..
ಸ್ವಲ್ಪ ಬೇಗಾನೆ ಮರೆಯಾಗಲು ಶುರು ಮಾಡಿದ...
ಸರಿ, ತುಮಕೂರಿನಲ್ಲಿ ಒಂದು ಕಪ್ ಟೀ ಕುಡಿದು, ಸ್ವಲ್ಪ ವಿಶ್ರಾಂತಿ ಪಡೆದು ಮುಂದುವರೆದೆವು.
ಸೂರ್ಯ ಮರೆಯದಂತೆ, ಕತ್ತಲು ಕವಿಯಾಲರಂಬಿಸಿತು. ಬೈಕಿನ ಹೆಡ್ ಲೈಟ್ ಹೊತ್ತಿಸಿದೆವು. ಅದೇನು ತೊಂದರೆಯಾಗಿತ್ತೋ ಏನೋ ಹೆಡ್ ಲೈಟ್ ನಿಂದ ಬೆಳಕು ತುಂಬಾ ಕಡಿಮೆ ಬರುತ್ತಿತ್ತು..ಅದನ್ನು ಹಾಕುವುದು ಒಂದೇ. ಹಾಕದಿರುವುದು ಒಂದೇ. ಮುಂಚೆ ಎಲ್ಲ ಸರಿಯಾಗಿತ್ತು. ಇದ್ದಕ್ಕಿದ್ದ ಹಾಗೆ ಈ ಹೆಡ್ ಲೈಟ್ ಕೈಕೊಟ್ಟಿದೆ. ಕತ್ತಲದಂತೆ ಮುಂದೆ ಏನು ಕಾಣಿಸದಾಯ್ತು. ಹಾಗೆ ನಿಧಾನವಾಗಿ ರಸ್ತೆಯಲ್ಲಿ ಬಿಡಿಸಿದ ಬಿಳಿಪಟ್ಟಿಯ ಮೇಲೆ ನಾನೊಂದು ೫೦ ಕಿಲೋಮೀಟರು ನಡೆಸೋದು, ಅವನೊಂದು ೫೦ ಕಿಲೋಮೀಟರು ನಡೆಸೋದು.. ಹೀಗೆ "ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....."

ಬಳ್ಳಾರಿಗೆ ಇನ್ನು ೪೦ ಕಿಲೋಮೀಟರು ಬಾಕಿಯಿತ್ತು. ಆಗ ಸಮಯ ರಾತ್ರಿ ೧೨ ಗಂಟೆ. ಕೆಲವು ಪೊಲೀಸರು ರಸ್ತೆಯಲ್ಲಿ ಹೋಗಿಬರುತ್ತಿದ್ದ ವಾಹನಗಳ ವಿಚಾರಣೆ ನಡೆಸುತ್ತ ನಿಂತಿದ್ದರು. ಹಾಗೆ ನಮ್ಮ ಬೈಕನ್ನು ನಿಲ್ಲಿಸಿದರು. ಗಾಡಿಯ ಪುಸ್ತಕ ಹಾಗು ಗಾಡಿ ನಡೆಸುತ್ತಿದ್ದ ನನ್ನ ಲೈಸನ್ಸ್ ಕೇಳಿದ್ರು. ಕೊಟ್ವಿ. ಎಲ್ಲ ಸರಿಯಾಗಿ ಇತ್ತು..
"ಯಾಕೆ ಇಷ್ಟು ಹೊತ್ತಿನಲ್ಲಿ ಹೋಗ್ತಾ ಇದ್ದೀರಾ...?"
ನಾವು ಸಮಂಜಸವಾದ ಕಾರಣಗಳನ್ನು ಕೊಟ್ಟೆವು.
ಆಗ ಅವರು... "ಸರಿ, ಇಷ್ಟು ಹೊತ್ತಿನಲ್ಲಿ ಹೋಗೋದು ಸೂಕ್ತವಲ್ಲ, ಇದು ಹೈವೆ (ಹೆದ್ದಾರಿ).. ಬಹಳ ಹುಷಾರ್ ಆಗಿ ಹೋಗ್ಬೇಕು. ಮುಂದೆ ಸ್ವಲ್ಪ ಡೇಂಜರ್ ದಾರಿ ಇದೆ. ನಿಧಾನವಾಗಿ ನೋಡ್ಕೊಂಡು ಹೋಗಿ.." ಎಂದು ಸಲಹೆಯನಿತ್ತರು.
ನಾವು "ಸರಿ ಸರ್" ಎಂದು ಹೇಳಿ.. ನಮ್ಮ ಪಯಣ ಮುಂದುವರೆಸಿದೆವು.

ನಾನು ತುಂಬಾ ನಿಧಾನವಾಗಿ ಗಾಡಿ ನಡೆಸುತ್ತಿದ್ದೆ..
ಹಿಂದೆ ಕೂತಿದ್ದ ನಟ.... "ಲೋ, ಸ್ವಲ್ಪ ಜೋರಾಗಿ ನಡೆಸೋ...ಬೇಗ ಊರು ತಲುಪೋಣ"
ನಾನು : "ನಟ, ಮುಂದೆ ಏನು ಕಾಣಿಸ್ತಾ ಇಲ್ಲ... ಜೋರಾಗಿ ನಡೆಸೋದು ಕಷ್ಟ..."
ನಟ : "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೇನೇ....., ಬಿಡು ನಾನೇ ನಡೆಸ್ತೀನಿ..."
ಸರಿ, ನೀನೆ ನಡೆಸು ಬಾ ಅಂತ ಹೇಳಿ ನಾನು ಹಿಂದಕ್ಕೆ ಕುಳಿತೆ.
ಈಗ ನಟ ಗಾಡಿ ನಡೆಸಲು ಶುರು ಮಾಡಿದ.
ಒಂದು ೨ ಕಿಲೋಮೀಟರು ಇದ್ದದ್ರಲ್ಲೇ ಜೋರಾಗಿ ಗಾಡಿ ಸಾಗ್ತಾ ಇತ್ತು...
ಏನಾಯ್ತೋ ಗೊತ್ತಿಲ್ಲ.. ಇಬ್ಬರು ಇದ್ದಕಿದ್ದ ಹಾಗೆ ಮದ್ಯರಸ್ತೆಯಲ್ಲಿ ಬಿದ್ದುಬಿಟ್ಟೆವು...
ಸುತ್ತ ಮುತ್ತ ಒಂದು ನರಪ್ರಾಣಿ ಸಹಿತ ಇಲ್ಲ. ಸುತ್ತಲು ಬರಿ ಕತ್ತಲು ಮಾತ್ರ ಕಾಣಿಸ್ತಿದೆ.
ಹೆದ್ದಾರಿಯ ರಸ್ತೆ ಮದ್ಯದಲ್ಲಿ ಇಬ್ಬರು ಅನಾಥರಾಗಿ ಬಿದ್ದಿದಿವಿ.
ನಟನಿಗೆ ಜಾಸ್ತಿ ಪೆಟ್ಟಾಗಿತ್ತು. ನನಗೂ ಸ್ವಲ್ಪ ಪೆಟ್ಟಾಗಿತ್ತು.
ನಾನು ಬೇಗನೆ ಎದ್ದು, ನಟನನ್ನು ಎಬ್ಬಿಸಿ, ಬೈಕನ್ನು ರಸ್ತೆಯ ಪಕ್ಕಕ್ಕೆ ತಂದು ನಿಲ್ಲಿಸಿದೆ.
ಸ್ವಲ್ಪ ಸಮಯ ನಟನಿಗೆ "ಏನಾಯ್ತು..?" ಎನ್ನುವ ಪ್ರಜ್ಞೆ ಸಹಿತ ಇರಲಿಲ್ಲ. ನಂತರ ನಿಧಾನವಾಗಿ ಚೇತರಿಸಿಕೊಂಡ.
ರಸ್ತೆಯ ಮೇಲೆ ದೊಡ್ಡ ಹುಲ್ಲಿನ ಬಣವೆ ಹಾಕಿದ್ದರು. ಆ ಹುಲ್ಲಿನ ರಾಶಿ ಅರ್ಧ ರಸ್ತೆಯನ್ನು ಆಕ್ರಮಿಸಿತ್ತು. ಆ ಹುಲ್ಲಿನ ರಾಶಿಯು ನಮ್ಮ ಬೈಕಿನ ಒಂದು ಭಾಗವನ್ನು ತಾಕಿದ್ದರಿಂದ ನಾವು ರಸ್ತೆಯಲ್ಲಿ ಬಿದ್ದದ್ದು ಎಂದು ತಿಳಿಯುತು.
ಈ ಅನಾಹುತದ ನಂತರ, ನಟ ಮತ್ತೆ ಬೈಕ್ ನಡೆಸುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಬಹಳ ಗಾಯಗಳಾಗಿದ್ದವು.
ನಾನೇ ಗಾಡಿ ನಡೆಸಲು ಶುರು ಮಾಡಿದೆ. ನಟ ಹಿಂದೆ ಕೂತಿದ್ದ.
ನಾನು ಈಗ ತುಂಬಾ ತುಂಬಾ ನಿಧಾನವಾಗಿ ಜಾಗುರತೆಯಿಂದ ಬೈಕ್ ನಡೆಸುತ್ತಿದ್ದೆ.
ಹಿಂದಿನಿಂದ ನಟ, ನನ್ನ ಬುಜವನ್ನು ಒತ್ತಿ ಹಿಡಿದು ಹೇಳಿದ... "ಲೋ......"
ನಾನು : "ಏನೋ..."
ನಟ : "ನಿಧಾನವಾಗಿ ನಡೆಸೋ..."
ನಾನು ತುಂಬಾ ತುಂಬಾ ನಿಧಾನವಾಗಿ ಬೈಕ್ ನಡೆಸುತ್ತಿದ್ದೆ. ನನ್ನ ಗಾಡಿ ಬಹುಶ ೫ ಕಿಲೋಮೀಟರು ವೇಗದಲ್ಲಿ ಹೋಗುತ್ತಿತ್ತು ಅನ್ಸುತ್ತೆ.
ನಾನು : "ಲೋ ನಟ, ನಾನು ತುಂಬಾ ನಿಧಾನವಾಗೆ ನಡಿಸ್ತಾ ಇದೀನಿ.. ಇದಕ್ಕಿಂತ ನಿಧಾನಾನ...?"
ನಟ : "ಲೋ, ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ, ಅಸ್ಟು ನಿಧಾನವಾಗಿ ಹೋಗು..ಸ್ವಲ್ಪ ನನ್ನ ಪರಿಸ್ಥಿತಿ ಅರ್ಥ ಮಾಡ್ಕೋ."
ನನಗೆ ಗಂಭೀರವಾದ ಪರಿಸ್ಥಿತಿಯಲ್ಲೂ ನಗು ಬಂತು... ಹತ್ತು ನಿಮಿಷದ ಮುಂಚೆ "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೆ" ಎನ್ನುವವನು, ಈಗ "ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ ಅಸ್ಟು ನಿಧಾನವಾಗಿ ಹೋಗು" ಅಂತ ಇದಾನೆ...

ಅಂತು ಆಮೆ ವೇಗದಲ್ಲಿ ಬಳ್ಳಾರಿಯನ್ನು ಸೇರಿದೆವು.
ನನಗೆ ಅಂಗಾಲಿನ ಮೇಲೆ ಪೆಟ್ಟಾಗಿತ್ತು. ಆ ಪೆಟ್ಟನ್ನು ನನ್ನ ಪ್ಯಾಂಟ್ ಮುಚ್ಚಿಕೊಂಡಿತ್ತು.
ಆದರೆ ನಟನಿಗೆ, ಗಲ್ಲದ ಮೇಲಾಗಿರುವ ಪೆಟ್ಟನ್ನು ಹೇಗೆ ಮುಚ್ಚಿಕೊಳ್ಳುವುದು... ?.
ಪೋಷಕರು "ಬೈಕಿನಲ್ಲಿ ದೂರದ ಪ್ರಯಾಣ ಮಾಡಬೇಡಿ" ಎಂದು ಸಲಹೆ ಕೊಟ್ಟಿದ್ದರು, ನಾವು ಅವರನ್ನು ಸುಮ್ಮನಿರಿಸಿ ಬಂದಿದ್ದೇವೆ. ಈಗ ಅವರಿಗೆ ನಿಜ ಹೇಳಿದರೆ, ಮುಂದೆ ನಮ್ಮನ್ನು ಬೈಕ್ ಹತ್ತಲು ಬಿಡುವರೇ ?... ಹಾಗಾಗೆ ಒಂದು ಸುಂದರ ಸುಳ್ಳು ಹೇಳಲು ಸಿದ್ದವಾದೆವು...
ಕೇಳಿದವರಿಗೆಲ್ಲ... "ದಾರಿಯಲ್ಲಿ, ಒಂದು ಹೋಟೆಲ್ಲಿಗೆ ಹೋದೆವು. ಆ ಹೋಟೆಲ್ ಎರಡು ಮಹಡಿಯನ್ನು ಹೊಂದಿತ್ತು. ನಾವು ಮೇಲ್ಮಹಡಿಗೆ ಹೋಗಲು, ಮೆಟ್ಟಲು ಹತ್ತುತ್ತಿರುವಾಗ ನಟ ಜಾರಿ(ಸ್ಕಿಡ್ ಆಗಿ) ಬಿದ್ದ. ಅದಕ್ಕೆ ನಟನಿಗೆ ಪೆಟ್ಟಾಯ್ತು..." ಅಂತ ಹೇಳಿ ಪ್ರಕರಣವನ್ನು ಮುಚ್ಚಿಹಾಕಿದೆವು. ನಿಜ ಹೇಳಬೇಕೆಂದರೆ, ನಟನಿಗೆ ಗಾಯಗಳು ವಾಸಿಯಾಗಲು ಕೆಲವು ವಾರಗಳು ಹಿಡಿಯಿತು.

ನನಗೆ ಈ ಘಟನೆ ನೆನಪಾದಾಗಲೆಲ್ಲ ನಟ ಆಡಿದ ಮಾತುಗಳನ್ನು ನೆನೆದು ನಗ್ತಾ ಇರ್ತೀನಿ.
Share/Save/Bookmark

Thursday, October 8, 2009

ಉಪ್ಪಿಗಿಂತ ರುಚಿ ಬೇರೆ ಇಲ್ಲ


ಮೈಸೂರಿನಲ್ಲಿದ್ದಾಗ ನಾವು ದಿನಾಲೂ ರಾತ್ರಿ ಊಟಕ್ಕೆ ಒಂದು ಮೆಸ್ಸ್'ಗೆ ಹೋಗ್ತಾ ಇದ್ವಿ.
ಊಟ ಪರವಾಗಿಲ್ಲ. ಬೇರೆ ಹೋಟೆಲುಗಳಿಗೆ ಹೋಲಿಸಿದರೆ ಚನ್ನಾಗೆ ಮಾಡ್ತಾ ಇದ್ರು..
ನಾವು ದಿನಾಲೂ ತಪ್ಪಿಸದೇ ಹೋಗ್ತಾ ಇದ್ದುದರಿಂದ, ಹೋಟೆಲ್ ನಡೆಸುತ್ತಿದ್ದ ಅಂಕಲ್, ಆಂಟಿ, ಅವರ ಮಗಳು ಹಾಗು ಅವರ ಮಗ ಎಲ್ರೂ ಪರಿಚಯವಾಗಿದ್ರು.
ಊಟ ಆದ ನಂತರ ಒಂದು ಲೋಟದಲ್ಲಿ ಮಜ್ಜಿಗೆ ಕೂಡ ಕೊಡ್ತಾ ಇದ್ರು. ಮಜ್ಜಿಗೆಗೆ ಸ್ವಲ್ಪ ಉಪ್ಪು ಕಮ್ಮಿ ಹಾಕ್ತ ಇದ್ರು. ನಾನು ಮಜ್ಜಿಗೆ ಕುಡಿತ ಇರುವಾಗ, ಕಡಿಮೆ ಉಪ್ಪು ಇರುವುದು ಗಮನಿಸಿ, ಮತ್ತೊಮ್ಮೆ ಉಪ್ಪು ತರಿಸಿ ಹಾಕಿಕೊಳ್ಳುತ್ತಿದ್ದೆ. ಊಟದ ನಂತರ ಮಜ್ಜಿಗೆ ಕುಡಿಯುವಾಗ ದಿನಾಲೂ ಉಪ್ಪು ಜಾಸ್ತಿ ಹಾಕಿಸಿಕೊಂಡು ಕುಡಿತ ಇದ್ದೆ.. ಎಸ್ಟೆ ಆಗ್ಲಿ ನಾನು ಉಪ್ಪು-ಖಾರ ತಿನ್ನೋ ಹುಡುಗ ಅಲ್ವಾ :P

ಸರಿ, ಎಲ್ಲ ಪರೀಕ್ಷೆಗಳು ಮುಗಿದವು. ಮರುದಿನ ಮೈಸೂರಿಗೆ ವಿದಾಯ ಹೇಳೋ ದಿನ. ಹಾಗಾಗಿ ಆ ಮೆಸ್ಸಿನಲ್ಲಿ ಕೊನೆಯ ದಿನ ಊಟ ಮಾಡಲು ಹೋದೆವು. ಹೋಟೆಲಿನ ಆಂಟಿ, ಅಂಕಲ್'ಗೆ ಹೇಳಿದ್ವಿ. "ಇದು ನಿಮ್ಮ ಮೆಸ್ಸಿನಲ್ಲಿ ಕೊನೆ ದಿನ" ಅಂತ.
ಅವರು ಅಂದು ನಮ್ಮನ್ನು ಮನೆ ಮಕ್ಕಳಂತೆ ತುಂಬಾ ಆತ್ಮಿಯಾವಾಗಿ ಸಲುಗೆಯಿಂದ ಊಟ ಬಡಿಸಿದರು.
"ಅವಾಗವಾಗ ಮೈಸೂರಿಗೆ, ನಮ್ಮ ಮನೆಗೆ ಬರ್ತಾ ಇರಿ..." ಅಂತ ಹೇಳಿದ್ರು...
ನಾವು "ಗ್ಯಾರೆಂಟಿ" ಬರ್ತಿವಿ ಅಂತ ಆಶ್ವಾಸನೆ ಕೊಟ್ವಿ..

ಪ್ರತಿದಿನದ ಹಾಗೆ ಊಟ ಮುಗಿಯುತ್ತಿರುವಾಗ ನನ್ನ ಟೇಬಲ್ಲಿನ ಮೇಲೆ ಮಜ್ಜಿಗೆ ಲೋಟವನ್ನು ಇಟ್ಟರು. ಆಂಟಿ, ಅಂಕಲ್, ಅವರ ಮಗಳು ಹಾಗು ಅವರ ಮಗ ಎಲ್ಲರು ನನ್ನನ್ನೇ ನೋಡ್ತಾ ಇದ್ರು.. ಬಹುಶ ಇದು ಕೊನೆ ದಿನ ಅಂತ ಸ್ವಲ್ಪ ಸೆಂಟಿಮೆಂಟ್ ಆಗಿರಬಹುದು ಅನ್ಕೊಂಡು ಸುಮ್ಮನಿದ್ದೆ. ಸರಿ, ಊಟದ ನಂತರ ಮಜ್ಜಿಗೆಯನ್ನು ಕುಡಿದೆ. ಆದರೆ ಇಂದು ಉಪ್ಪು ಹಾಕಿಕೊಳ್ಳುವುದನ್ನು ಮರೆತೆ. ಇನ್ನೂ ಅವರು ನನ್ನನ್ನೇ ನೋಡುತ್ತಿದ್ದುದು ನೋಡಿ...
ತಡೆದುಕೊಳ್ಳಲಾಗದೆ ಕೊನೆಗೆ ಕೇಳೆಬಿಟ್ಟೆ... "ಯಾಕೆ ಆವಗ್ಲಿಂದ ಆ ಥರ ನೋಡ್ತಾ ಇದ್ದೀರಾ....??"
ಅವರು ನಗುತ್ತ ಕೇಳಿದರು... "ಮಜ್ಜಿಗೆ ಹೇಗಿತ್ತು.. ?"
ನಾನು.. "ಚನ್ನಾಗಿತ್ತು...."
ಅವರು.. "ಮತ್ತೆ.. ಉಪ್ಪು ಜಾಸ್ತಿ ಇರ್ಲಿಲ್ವ...?"
ನಾನು... "ಇಲ್ಲ. ಸರಿಯಾಗೆ ಇತ್ತು"
ಅವರು... "ಅಯ್ಯೋ ದೇವರೇ, ನಾವು ನಿಮ್ಮನ್ನು ಚೂಡಯಿಸಲು ಬಹಳ ಜಾಸ್ತಿ ಉಪ್ಪು ಹಾಕಿದರೂ, ನೀವು ಅದೇನು ಲೆಕ್ಕವಿಲ್ಲದಂತೆ ಕುಡಿದಿರಲ್ವಾ...?"
ನಾನು... "ಒಹ್.. ಹಾಗಾ... ನನಗೆ ಹಾಗೇನೂ ಅನ್ನಿಸಲಿಲ್ಲ... "
ಆಗ ಅವರು... "ನೀವು ಸಾಮಾನ್ಯದವರು ಅಲ್ಲ ಬಿಡಿ" ಅಂತ ನಗುತ್ತ ನುಡಿದರು...

NO BP, BE HAPPY.... :)
Share/Save/Bookmark

Monday, September 21, 2009

ನಮ್ಮ ಮಾವ

ಮೈಸೂರು.
ಇಲ್ಲಿ ನಾನು ಕಳೆದಿದ್ದು ಸರಿಯಾಗಿ ಮೂರು ವರ್ಷಗಳು.
ಆದ್ರೆ ನೆನಪುಗಳು ಸಾವಿರಾರು. ನನ್ನ ನೆನಪಿನ ಪುಟದ ಇನ್ನೊಂದು ಹಾಳೆ ನಿಮ್ಮ ಮುಂದೆ.
ಒಂದ್ಸಾರಿ ಬೋಗಾದಿಯಿಂದ (ಮೈಸೂರಿನಲ್ಲಿ ಇರುವ ಒಂದು ಬಡಾವಣೆ) ನಾನು, ನಟ, ರಾಘು ಮೂವರು ಸೇರಿ ತುರ್ತಾಗಿ ಜಯಲಕ್ಷ್ಮಿಪುರಂ ಕಡೆ ಹೋಗಬೇಕಾಗಿತ್ತು,
ಬೊಗದಿಯಿಂದ ಜಯಲಕ್ಷ್ಮಿಪುರಂಗೆ ಜಾಸ್ತಿ ಅಂದ್ರು ೩ ಕಿಲೋಮೀಟರು ಆಗಬಹುದು.
ಆದ್ರೆ ಸರಿಯಾದ ಬಸ್ಸುಗಳ ವ್ಯವಸ್ಥೆ ಇರ್ಲಿಲ್ಲ.
ಸದ್ಯಕ್ಕೆ ಇದ್ದದ್ದು ನನ್ನದೊಂದು ಬೈಕ್...
ಮೂವರು ಒಂದು ಬೈಕಿನಲ್ಲಿ ಹೋಗುವುದು ಅಪರಾಧ. ಆದ್ರೆ ಏನು ಮಾಡೋದು ನೀವೇ ಹೇಳಿ, ೩ ಕಿಲೋಮೀಟರು ಹೋಗೋಕೆ ಬಸ್ಸಿಗಾಗಿ ಗಂಟೆಗಳ ಕಾಲ ಕಾಯಬೇಕಾ ...?
ಸರಿ, ಮೂವರು ಒಂದು ಬೈಕಿನಲ್ಲಿ ಕುಳಿತು ಹೊರೆಟೆವು..
ಮುಖ್ಯರಸ್ತೆಯಲ್ಲಿ ಹೋದ್ರೆ ಮಾವ ಇರ್ತಾನೆ ಅಲ್ವಾ... ? (ಮಾವ ಅಂದ್ರೆ ನಮ್ಮ ಹುಡುಗರ ಭಾಷೆಯಲ್ಲಿ ಪೋಲಿಸ್ ಅಂತ :D ).
ಆದಕಾರಣ ಅಡ್ಡದಾರಿಯಲ್ಲಿ ಹೋಗೋದಕ್ಕೆ ಶುರು ಮಾಡಿದ್ವಿ..
ನಮ್ಮ ಹಣೆಬರಹಕ್ಕೆ ಮಾವ ಅಡ್ಡ ರಸ್ತೆಯಲ್ಲಿ ಅಡ್ಡ ಹಾಕೊಂಡು ಕಾಯ್ತಾ ಇದ್ದ..
ತಪ್ಪಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನಿಲ್ಲಿಸಿಬಿಟ್ಟ..
ಗಾಡಿ ಹೊಡೆಯುತ್ತಿದ್ದ ನಾನು, ಬೇರೆ ದಾರಿಯಿಲ್ಲದೆ ಗಾಡಿ ನಿಲ್ಲಿಸಿದೆ....
ಮಾವ ನಮ್ಮನ್ನು ಪ್ರೀತಿಯಿಂದ ಕರೆದು, ಗಾಡಿಯ ಕೀಲಿಯನ್ನು ಕೈಗೆತ್ತಿಕೊಂಡು... "ಕಟ್ಟಪ್ಪ ಫೈನ್" ಅಂದ..
(ನಾನು ಮನಸಲ್ಲೇ ಅಂದುಕೊಂಡೆ, ನೀವು (ಪೊಲೀಸರು) ಹತ್ತು ಹತ್ತು ಜನ ಒಂದೇ ಬೈಕಿನಲ್ಲಿ ಹೋದರೆ ಪೆರೇಡ್.. ನಾವು ಹೋದರೆ ಅಪರಾಧ... P )
ನಾವು ಏನು ಕೇಳಿಕೊಂಡರು ಮಾವ ಬಿಡುವ ಸ್ತಿತಿಯಲ್ಲಿರ್ಲಿಲ್ಲ..
ಬೇರೆ ದಾರಿ ಇಲ್ಲದೆ ಫೈನ್ ಕಟ್ಟಿದ್ವಿ...
ರಸೀದಿ ಕೊಟ್ರೋ, ಇಲ್ವೋ ಅಂತ ಸರಿಯಾಗಿ ನೆನಪಿಲ್ಲ....
ಸರಿ, ಮತ್ತೆ ಮೂವರು ಬೈಕ್ ಹತ್ತಿ ಹೊರಡುತ್ತಿರುವಾಗ....
ಅವರ ಗುಂಪಿನಲ್ಲೇ ಇದ್ದ ಇನ್ನೊಬ್ಬ ಮಾವ "ನಿಲ್ಲಿಸ್ರೋ..." ಅಂತ ಕೂಗಿದ..
ನಾವು ... "ಸಾರ್, ನಾವು ಆವಾಗಲೇ ಫೈನ್ ಕಟ್ಟಿದಿವಿ"
"ಫೈನ್ ಕಟ್ಟಿದ ಮಾತ್ರಕ್ಕೆ ನಮ್ಮ ಮುಂದೇನೆ ಟ್ರಿಪ್ಸ್ ಹೋಗೋದ...?... ಸ್ವಲ್ಪ ಮುಂದೆ ಹೋಗಿ, ಹತ್ತಿ..." ಅಂದ
ನಮ್ಮ ಮಾವನ ಸಲಹೆಯಂತೆ ಮುಂದೆ ಹೋಗಿ ಮತ್ತೆ ಮೂವರು ಒಂದೇ ಬೈಕಿನಲ್ಲಿ ಹತ್ತಿ ಹೊರಟೆವು...

ಮನವಿ: ಈ ಲೇಖನ ಯಾರಾದ್ರೂ ಪೋಲೀಸಿನವರು ಓದಿದ್ರೆ ಕ್ಷಮಿಸಿಬಿಡಿ.. ಏನೋ ಹುಡುಗ ತಿಳಿಯದೆ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಾನೆ ಅಂತ ಹೊಟ್ಟೆಗೆ ಹಕೊಂಬಿಡಿ... ಇಂತಿ ನಿಮ್ಮ ಪ್ರೀತಿಯ ಆಳಿಯ...
Share/Save/Bookmark

Tuesday, September 15, 2009

ಮಂಜ, ಮಹೇಶ ಹಾಗು ಹೊಸ ಪಲ್ಸರ್..



ಮೊನ್ನೆ ನಮ್ಮ ಎದುರುಮನೆ ಮಂಜ, ಹೊಸ ಪಲ್ಸರ್ ಬೈಕ್ ಖರೀದಿಸಿ ಅದನ್ನು ತರುವುದಕ್ಕೆ ನಮ್ಮ ಮಹೇಶನ ಜೊತೆ ಹೋದ.
ಸರಿ. ಹೊಸ ಗಾಡಿಗೆ ಏನೇನು ಹಾಕಿಸಬೇಕೋ ಅದನ್ನೆಲ್ಲಾ ಹಾಕಿಸಿಕೊಂಡರು.
ಈಗ ಹೊಸ ಗಾಡಿ ರೆಡಿಯಾಗಿದೆ.
ಶೋರೂಮಿನವರು ಗಾಡಿಯ ಕೀಯನ್ನು ನಮ್ಮ ಮಂಜನ ಕೈಗಿಟ್ಟರು.
ಅವನು ಆ ಗಾಡಿಗೆ ಕೀ ಇಂದ ಗಾಡಿಯನ್ನು ಸ್ಟಾರ್ಟ್ ಮಾಡಿ, ಮಹೇಶನಿಗೆ ಓಡಿಸಲು ಹೇಳಿದ.
ಆಗ ನಮ್ಮ ಮಹೇಶ "ಪರವಾಗಿಲ್ಲ ನೀನೆ ಓಡಿಸೋ. " ಎಂದ.
ಮಂಜ: "ನೀನೆ ಓಡಿಸೋ" ಎಂದ.
ಮಹೇಶ: "ಲೋ, ಇದು ನಿನ್ನ ಹೊಸ ಗಾಡಿ, ಮೊದಲು ನೀನೆ ಓಡಿಸು".
ಆಗ ನಮ್ಮ ಮಂಜ "ಗುರುವೇ, ನನಗೆ ಗಾಡಿ ಓಡಿಸಲು ಬರುವುದಿಲ್ಲ, ಅದಕ್ಕೆ ನಿನ್ನನ್ನು ಕರೆದುಕೊಂಡು ಬಂದಿದ್ದು" ಎಂದುಬಿಡುವುದೇ ?
Share/Save/Bookmark

Monday, September 7, 2009

ಮುಂಚೆನೇ ಹೇಳಬಾರದ ?

ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಾವೆಲ್ಲರೂ ತುಂಬಾ ಏಕಾಗ್ರತೆಯಿಂದ ಓದುತ್ತಿದ್ದೆವು. :P
ನಾನು, ಸಂಗು ಮತ್ತು ರಾಘು ಓದುತ್ತ ಕುಳಿತಿದ್ದಾಗ ಹೊರಗಡೆಯಿಂದ ನಮ್ಮ ಇನ್ನೊಬ್ಬ ಗೆಳೆಯ ನಟರಾಜ್(ನಟ) ಬಂದು ಏನೋ ಹೇಳಲು ಶುರು ಮಾಡಿದ. ನಾವೆಲ್ಲಾ ಓದುವುದನ್ನು ಬಿಟ್ಟು ಅವನು ಹೇಳುತ್ತಿರುವುದನ್ನು ಕೇಳುತ್ತಿರುವಾಗ......
ಅವನು ಏನನ್ನೋ ಹೇಳುತ್ತಾ ಹೇಳುತ್ತಾ.... " ನಗ್ರೋ (smile) " ಎಂದ.
ನಾವೆಲ್ಲರೂ ಆಶ್ಚರ್ಯದಿಂದ "ಯಾಕೋ ?" ಅಂತ ಕೇಳಿದ್ವಿ.
ಆಗ ಅವನು ಹೇಳಿದ "ನಾನು ಹೇಳಿದ್ದು ಜೋಕ್ ಕಣೋ ಅದಕ್ಕೆ ನಗ್ರೋ" ಅಂದ.
ಆಗ ಸಂಗು ಹೇಳಿದ "ಮುಂಚೆನೇ ಹೇಳಬಾರದ ಜೋಕ್ ಹೇಳ್ತಾ ಇದೀನಿ ಅಂತ". :D
Share/Save/Bookmark

Friday, June 26, 2009

ನೀರು ಚಲ್ಲಬೇಡಿ

"ಏನಪ್ಪಾ ಶಿವು, ನಮಗೆ ಬುದ್ದಿ ಹೇಳೋ ಲೆವೆಲ್'ಗೆ ಬಂದ್ಬಿಟ್ಯ ?"
"ಅಯ್ಯೋ, ಕ್ಷಮಿಷಿ ಮಹಾಸ್ವಾಮಿ. ನಾನು ಅಸ್ಟೊಂದು ದೊಡ್ಡ ವ್ಯಕ್ತಿ ಅಲ್ಲ. ನನ್ನ ಲೇಖನಕ್ಕೆ ಶೀರ್ಷಿಕೆ ಅದೇ ಸರಿ ಅನಿಸ್ತು, ಅದಕ್ಕೆ ಹಾಕಿದೆ. ಅಸ್ಟೆ."
ಸರಿ, ನೇರವಾಗಿ ನಡೆದ ಘಟನೆಗೆ ಬರ್ತೀನಿ.

ನಮ್ಮ ಊರಿಂದ ೩೫ ಕಿಲೋಮೀಟರು ದೂರದಲ್ಲಿ ಒಂದು ಬೆಟ್ಟ ಇದೆ. ಆ ಬೆಟ್ಟದಲ್ಲಿ ಒಂದು ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಶ್ರಾವಣ ಸೋಮವಾರಗಳಲ್ಲಿ ಬಹಳ ಜನ ಹೋಗ್ತಾರೆ. ಆ ದಿನ ರಾತ್ರಿ ಅಲ್ಲೇ ಇದ್ದು, ಮರುದಿನ ಬೆಳಿಗ್ಗೆ ಹಿಂದಿರುಗುತ್ತಾರೆ.
ಒಂದು ಶ್ರಾವಣ ಸೋಮುವಾರ ನಾನು, ನನ್ನ ತಮ್ಮ ಹಾಗು ನನ್ನ ಸ್ನೇಹಿತರು ಸೇರಿ ಹೋಗಿದ್ವಿ.
ಸಾಯಂಕಾಲದ ವೇಳೆಗೆ ದೇವರ ದರ್ಶನ ಆಯ್ತು.
ರಾತ್ರಿ ಚನ್ನಾಗಿ ಒಂದು ಹೋಟೆಲಿನಲ್ಲಿ ಊಟ ಮಾಡಿ, ದೇವಸ್ತಾನದ ಆವರಣದಲ್ಲಿದ್ದ ದೊಡ್ಡ ಸಭಾಂಗಣಕ್ಕೆ ಹೋದೆವು. ದೇವಸ್ತಾನಕ್ಕೆ ಬರುವ ಭಕ್ತರು ರಾತ್ರಿ ಅಲ್ಲೇ ಮಲಗೋದು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹೇಗೋ ನಾವು ಅಲ್ಲಿ ಮಲಗಲು ಜಾಗ ಮಾಡಿಕೊಂಡೆವು.
ಅಲ್ಲೇ ಕೂತು, ಸ್ವಲ್ಪ ಹೊತ್ತು ಸ್ನೇಹಿತರೆಲ್ಲ ಸೇರಿ ಹರಟೆ ಮಾತುಗಳನ್ನಾಡಿ, ಅಲ್ಲೇ ಮಲಗಲು ಸಿದ್ದರಾದೆವು.
ಆಸ್ಟರಲ್ಲಿ ನನ್ನೊಬ್ಬ ಗೆಳೆಯ "ಲೋ, ನೀರು ಚಲ್ಲಿ ಬಂದು ಮಲಗೋಣ, ಯಾರಾದ್ರೂ ನೀರು ಚಲ್ಲೋಕೆ ಬರ್ತಿರಾ ?" ಅಂತ ಕೇಳಿದ.
ಅಲ್ಲೇ ಪಕ್ಕದಲ್ಲಿ ಚಿಕ್ಕ ಮಗುವಿನ ಜೊತೆಗಿದ್ದ ಮಹಿಳೆಗೆ ಅದು ಕೇಳಿಸಿತು, ಆಗ ಆ ಮಹಿಳೆ ಹೇಳಿದ್ಲು:
"ಅಣ್ಣ, ನೀರು ಚೆಲ್ಲಬೇಡಿ, ದಯವಿಟ್ಟು ಇಲ್ಲಿ ಕೊಡಿ.
ಮಗುಗೆ ಬಾಯಾರಿಕೆಯಾಗಿದೆ. ನೀರು ಕುಡಿಸಲು ಆಸ್ಟು ದೂರ ಹೋಗ್ಬೇಕು,
ನೀರು ಚೆಲ್ಲಿ ಯಾಕೆ ವೇಸ್ಟ್ ಮಾಡ್ತಿರ ?, ಇಲ್ಲಿ ಕೊಡಿ,
ಮಗುಗೆ ಕುಡಿಸ್ತೀನಿ"

ಆಗ ನನ್ನ ಸ್ನೇಹಿತರಿಗೆಲ್ಲ ಸಿಕ್ಕಾಪಟ್ಟೆ ನಗು ಬರುತ್ತಿದ್ದರೂ ತಡೆದುಕೊಂಡು, ಹೀಗೆ ಹೇಳಿದರು.. "ಅಕ್ಕ, ಈ ನೀರು ಕೆಟ್ಟು ಹೊಗಿದವೇ. ಇವು ಕೊಡಿಯಲು ಯೋಗ್ಯವಲ್ಲ."

ಅಂದಹಾಗೆ... ಮೂತ್ರ ವಿಸರ್ಜನೆಗೆ ನಮ್ಮ ಭಾಷೆಯಲ್ಲಿ "ನೀರು ಚಲ್ಲೋದು", "ಟ್ಯಾಂಕ್ ಕಾಲಿ ಮಾಡೋದು" ಅಥವಾ "ಹಾಡು ಹಾಡೋದು" ಅಂತ ಹೇಳ್ತಿವಿ.
ಸಾರ್ವಜನಿಕ ಸ್ಥಳಗಳಲ್ಲಿ ಬಾಯ್ಬಿಟ್ಟು ಹೇಳಲು ನಾಚಿಕೆ ಆಗುತ್ತೆ ಆಲ್ವಾ...?
Share/Save/Bookmark

Monday, June 22, 2009

ಬಿಲಿಯನ್

ಮೊನ್ನೆ ಹೀಗೆ ಯಾವುದೋ ಪುಸ್ತಕ ಓದುತ್ತ ಇದ್ದೆ. ಅದ್ರಲ್ಲಿ ಬಿಲಿಯನ್ ಹಾಗು ಮಿಲಿಯನ್ ಎನ್ನುವ ಪದಗಳನ್ನು ನೋಡಿದೆ.
೧ ಬಿಲಿಯನ್ ಅಂದ್ರೆ ಎಷ್ಟು. ?
ನನಗೆ ಒಂದು ಮಿಲಿಯನ್ ಅಂದ್ರೆ ೧೦ ಲಕ್ಷ ಅಂತ ಗೊತ್ತಿತ್ತು.
೧ ಮಿಲಿಯನ್ = ೧,೦೦೦,೦೦೦
ಸರಿ, ಒಂದು ಮಿಲಿಯನ್ ಗೆ ಒಂದರ ಮುಂದೆ ೬ ಸೊನ್ನೆ ಇದೆ.

ಹಾಗೆ, ೧ ಬಿಲಿಯನ್ ಗೆ ಎಷ್ಟು ಸೊನ್ನೆ ಇರಬಹುದು ಎಂದು ಆಲೋಚಿಸುತ್ತ ಇರುವಾಗ ನನ್ನ ರೂಮಿನಲ್ಲಿ ನನ್ನ ಗೆಳೆಯ ನಟ ಬಂದ.
ನಾನು ತಕ್ಷಣ ಅವನನ್ನು ಇದೆ ಪ್ರೆಶ್ನೆ ಕೇಳಿದೆ.. "ಲೋ ನಟ, ೧ ಬಿಲಿಯನ್'ನಲ್ಲಿ ಒಂದರ ಮುಂದೆ ಎಷ್ಟು ಸೊನ್ನೆ ಇರ್ತವೆ... ?"
ಅವನು: "ಎಸ್ಟೋ ಇರ್ಬೇಕು ಕಣೋ, ಜ್ಞಾಪಕ ಇಲ್ಲ. ಶಬ್ದಕೋಶ ನೋಡು"

ನನ್ನ ಹತ್ತಿರ ಇದ್ದ "English to Kannada" ಶಬ್ದಕೋಶ ತೆರೆದೆ.
ಅದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು.
ಆ ಶಬ್ದಕೋಶದಲ್ಲಿ ೧ ಬಿಲಿಯನ್ = ೧, ೦೦೦,೦೦೦,೦೦೦,೦೦೦ ಎಂದಿತ್ತು.
ಹಾಗಾದರೆ ಒಂದು ಬಿಲಿಯನ್ ಗೆ ಒಂದರ ಮುಂದೆ ೧೨ ಸೊನ್ನೆಯೇ...?
ನನಗೆಗೋ ಸಂಶಯ ಬಂತು.
ಬೇರೆ ಇಂಗ್ಲಿಷ್ ಶಬ್ದಕೋಶ ತೆಗೆದು ನೋಡಿದೆ. ಅದ್ರಲ್ಲಿ ಹೀಗಿತ್ತು...
Billion: 1. [Brit] The number that is represented as a one followed by 12 zeros; in the United Kingdom the usage followed in the United States is frequently seen
2. The number that is represented as a one followed by 9 zeros.
ಆಗ ಗೊತ್ತಾಯ್ತ UK ನಲ್ಲಿ ಒಂದರ ಮುಂದೆ ೧೨ ಸೊನ್ನೆ. ಅದೇ ಬೇರೆ ದೇಶದಲ್ಲಿ ಒಂದರ ಮುಂದೆ ೯ ಸೊನ್ನೆ.
ನಮ್ಮ ನಟ ಕೂಡ ಅದನ್ನು ನೋಡಿದ.
ತಕ್ಷಣ ನಟ ಹೇಳಿದ : " ಲೋ, ಎಂತ ಅನಾಹುತ ಆಗಿಬಿಡ್ತಾ ಇತ್ತೋ..."
ನಾನು ಆಶ್ಚರ್ಯದಿಂದ " ಯಾಕೋ ? " ಅಂದೆ.
ಆಗ ಅವನು: "ನಿನ್ನ ಶಬ್ದಕೋಶ ನೋಡಿ, ಒಂದು ವೇಳೆ ನಾನು ಯಾರಿಗಾದರು ಒಂದು ಬಿಲಿಯನ್ ಬ್ಯಾಂಕ್ ಚೆಕ್(Bank Check) ಕೊಡುವಾಗ ಒಂಬತ್ತರ ಬದಲು ಹನ್ನೆರೆಡು ಸೊನ್ನೆ ಹಾಕಿದ್ರೆ ಏನು ಕಥೆ ?.
ಯಪ್ಪಾ, ಮುಂದಿನ ಸಾರಿ ನೋಡಿ ಸಹಿ ಹಾಕಬೇಕು...".

ನಾನು ಬಿದ್ದು ಬಿದ್ದು ನಕ್ಕೆ...
Share/Save/Bookmark

Tuesday, June 16, 2009

ಹದಿನಾರು

ಸ್ನೇಹಿತರಲ್ಲ ಸೇರಿ ಮೈಸೂರಿನಲ್ಲಿದ್ದಾಗ ಚಾಮುಂಡಿ ಬೆಟ್ಟಕ್ಕೆ ಹೋಗಲು ನಿರ್ಧರಿಸಿದೆವು.
ಚಾಮುಂಡಿ ಬೆಟ್ಟಕ್ಕೆ ಮೊದಲ ಬಾರಿಗೆ ಹೋಗ್ತಾ ಇರೋದು.
ಸರಿ, ನಮ್ಮ ಏರಿಯಾದಿಂದ ನಗರ ಬಸ್ ನಿಲ್ದಾಣಕ್ಕೆ ಹೋದೆವು. ಅಲ್ಲಿಂದ ಇನ್ನೊಂದು ಬಸ್ ಹಿಡಿದು ಚಾಮುಂಡಿ ಬೆಟ್ಟಕ್ಕೆ ಹೋಗಬೇಕಾಗಿತ್ತು.

ನಗರ ಬಸ್ ನಿಲ್ದಾಣದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಹೀಗೆ ಕೇಳಿದೆ:
ನಾನು: "ಸಾರ್, ಇಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಸ್ ಎಲ್ಲಿ ನಿಲ್ತಾವೆ ? ".
ಆ ವ್ಯಕ್ತಿ: " ಓ ಅಲ್ಲಿ ಒಂದು ಬಸ್ ಕಾಣಿಸ್ತಾ ಇದೆಯಲ್ಲ, ಅಲ್ಲೇ ಬಸ್ ನಿಲ್ಲೋದು. ಅಲ್ಲಿ ಯಾವದೋ ಬಸ್ಸ ನಿಂತ ಹಾಗಿದೆ ನೋಡು. ಆ ಬಸ್ ಹೋದರು ಹೋಗಬಹುದು, ಹೋಗಿ ನೋಡಿ.." ಎಂದು ದೂರದಲ್ಲಿದ್ದ ಒಂದು ಬಸ್ ತೋರಿಸುತ್ತಾ ಹೇಳಿದ.

ನಾವು ಸ್ನೇಹಿತರೆಲ್ಲ ಸೇರಿ ಆ ಬಸ್ಸಿನತ್ತ ಓಡಿ ಹೋಗಿ, ಆ ಬಸ್ ಒಳಹೊಕ್ಕು, ಆ ಬಸ್ಸಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಕೇಳಿದೆ:
ನಾನು: " ಸಾರ್, ಈ ಬಸ್ಸು ಎಲ್ಲಿಗೆ ಹೋಗುತ್ತೆ..? "
ಆ ವ್ಯಕ್ತಿ: "ಹದಿನಾರು"
ನಾನು: "ಹದಿನಾರು..?.. ಬಸ್ ನಂಬರ್ ಅಲ್ಲ ಸ್ವಾಮಿ.., ಬಸ್ ಎಲ್ಲಿಗೆ ಹೋಗುತ್ತೆ..?"
ಆ ವ್ಯಕ್ತಿ: "ಅಯ್ಯೋ, ಹದಿನಾರು ಸ್ವಾಮಿ"
ನಾನು: "ಅಲ್ಲ ರೀ, ನಾನು ಕೇಳ್ತಾ ಇರೋದು, ಈ ಬಸ್ಸು ಎಲ್ಲಿಗೆ ಹೋಗುತ್ತೆ ..?"
ಆ ವ್ಯಕ್ತಿ ಮತ್ತದೇ ರಾಗದಲ್ಲಿ "ಹದಿನಾರು" ಎಂದ.
ನನಗೆ ತೆಲೆಬಿಸಿಯಾಯ್ತು.
ಸರಿ, ಬಸ್ಸಿನ ಫಲಕದಲ್ಲಿ ಏನು ಹಾಕಿದರೆ ನೋಡಲು ಬಸ್ಸಿನಿಂದ ಇಳಿದು, ಫಲಕ ನೋಡಿದೆ.
ಆಗ ಗೊತ್ತಾಯ್ತ.. ಆ ಬಸ್ಸು ಹೋಗುತ್ತಿದ್ದ ಸ್ಥಳದ ಹೆಸರೇ "ಹದಿನಾರು". ಬಸ್ಸಿನ ನಂಬರ್ ಬೇರೆಯೇ ಇತ್ತು.
ನಾವೆಲ್ಲರೂ ಗಹಗಹಿಸಿ ನಕ್ಕೆವು.

ನಮ್ಮ ಕೆಲವು ಊರುಗಳ ಹೆಸರುಗಳು ಹೀಗೆ ಅಲ್ಲವೇ..?
ಉದಾಹರಣೆಗೆ:
ಸೋಮುವಾರಪೇಟೆ, ಶನಿವಾರಸಂತೆ...
Share/Save/Bookmark

Tuesday, June 2, 2009

ಹೆಡ್ ಲೈಟ್

ಇದು ಮೈಸೂರಿನಲ್ಲಿದ್ದಾಗ ನಡೆದ ಘಟನೆ.
ನಾನು ಬೆಳಿಗ್ಗೆ ೭ ಗಂಟೆಗೆ, ನನ್ನ ದ್ವಿಚಕ್ರ ವಾಹನದ ಮೇಲೆ ಕುಳಿತು ಹೊರಟಿದ್ದೆ.
ಮೈಸೂರು ಅಂದ್ರೆ ಕೇಳಬೇಕೆ ? ತುಂಬಾ ಪ್ರಶಾಂತವಾದ ಊರು.
ಕಾಲಿ ಕಾಲಿ ರಸ್ತೆಗಳಲ್ಲಿ ನನ್ನ ಸವಾರಿ ಹೊರಟಿತ್ತು.
ಒಂದು ಸುಂದರವಾದ ಹುಡುಗಿ ಸ್ಕೂಟಿಯಲ್ಲಿ ಕುಳಿತು ನನಗೆ ಎದುರು ಬರುತ್ತಿದ್ದಳು. ಅವಳ ಸ್ಕೂಟಿಯ ಹೆಡ್ ಲೈಟ್ (Head Light) ಬೆಳಗುತ್ತಿತ್ತು.
ಬೆಳಕಾಗಿದ್ದರೂ ಇನ್ನು ಹೆಡ್ ಲೈಟ್ ಹಾಕೊಂಡು ಬರ್ತಾ ಇರೋದನ್ನ ನೋಡಿ ಮನಸಲ್ಲೇ "ಇವಳಿಗೆ ಇನ್ನು ಬೆಳಕಾರ್ದಂಗಿಲ್ಲ....." ಅನ್ಕೊಂಡೆ.
ಹೋಗ್ಲಿ ಬಿಡು. ಹೆಡ್ ಲೈಟ್ ಉರಿತಾ ಇದೆ ಅಂತ ಅವಳಿಗೆ ಸನ್ನೆ ಮಾಡಿ ಹೇಳೋಣ ಅನಿಸಿತು.
ಸರಿ, ಹೇಳಲು ಕೈ ಮುಂದೆ ಮಾಡಲು ಹೋದಾಗ ಮನಸೇಕೋ ತಡೆಯಿತು.
ಆ ಥರ ಸನ್ನೆ ಮಾಡಿದರೆ ಅಪಾರ್ಥವಾಗಬಹುದು ಎನಿಸಿತು.
ಸನ್ನೆ ಮಾಡಲು ಹೋದ ಕೈ ಹಿಂತೆಗೆದೆ.
ಅವಳು, ನನ್ನ ಗಾಡಿಗೆ ಹತ್ತಿರ ಬರುತ್ತಿದ್ದಂತೆ, ನಾನು ಮಾಡಬೇಕೆಂದುಕೊಂಡಿದ್ದ ಸನ್ನೆ ಅವಳು ಮಾಡಿದಳು.
ನಾನಗೆ ಆಶ್ಚರ್ಯವಾಯಿತು.
ಆಗ ಗೊತ್ತಾಯ್ತ, ನನ್ನ ಗಾಡಿಯ ಹೆಡ್ ಲೈಟ್ ಕೂಡ ಉರಿತಾ ಇದೆ ಅಂತ.
Share/Save/Bookmark

Tuesday, May 26, 2009

ನಾಚಿಕೆ

೪ ತಿಂಗಳ ಹಿಂದೆ ನನ್ನ ಸ್ನೇಹಿತ ಸಂಗು(ಸಂಗಮೇಶ್) ಅವನ ಜೊತೆಗೂಡಿ ಅವರ ಸಂಬಂಧಿಕರ ಮನೆಗೆ ಹೋಗಿದ್ವಿ.
ನನ್ನನ್ನು ಹಾಲ್'ನಲ್ಲಿದ್ದ ಸೋಫಾದ ಮೇಲೆ ಕುಳ್ಳಿರಿಸಿ ಒಳಗಡೆ ಹೋದ.
ಅವರು ಬಾಗಲಕೋಟೆ ಕಡೆಯವರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು.
ಸ್ವಲ್ಪ ಸಮಯದ ಬಳಿಕ ಒಳಗಡೆಯಿಂದ ಅವರ ಮನೆಯವರು ದೊಡ್ಡ ಗ್ಲಾಸಿನಲ್ಲಿ ಏನೋ ಹಿಡಿದು ತಂದು ನನಗೆ ಕೊಡುವುದಕ್ಕೆ ಮುಂದಾದರು.
ನಾನು ಮೊದೆಲೇ ನಾಚಿಕೆ ಸ್ವಭಾವದವನು.
ಬೇಡ ಬೇಡ ಎಂದು ನಾಚಿಕೆಯಿಂದಲೇ ಸ್ವಲ್ಪ ದೂರ ಸರಿಯುತ್ತ ಕೈಯನ್ನು ಅಡ್ಡ ಹಿಡಿದೆ.
ಅವರು ಸ್ವಲ್ಪ ಆಲೋಚಿಸುತ್ತ ನಿಂತು, ನೀವು ಗ್ಲಾಸಿನಲ್ಲಿ ಏನಿದೆ ಎಂದುಕೊಂಡಿರಿ ಅಂದ್ರು...
ನಾನು ಗ್ಲಾಸಿನಲ್ಲಿ ಏನಿದೆ ಎಂದು ಇಣಿಕಿ ನೋಡಿದೆ.
ಅದ್ರಲ್ಲಿ ಇದ್ದದ್ದು ನೀರು.
ನಾಚಿಕೆಯಿಂದ ತಲೆ ತಗ್ಗಿಸಿದೆ.
ಮನೆಗೆ ಬಂದವರಿಗೆ ಮೊದಲು ಕುಡಿಯಲು ನೀರು ಕೊಡುವುದು ಸಂಪ್ರದಾಯ.
ಏನ್ ಮಾಡೋದು, ನನಗೆ ಗೊತ್ತಿರ್ಲಿಲ್ಲ.
ಅಂತು ಅವತ್ತು, ನಾನು ಅವರ ಮನೆಯಲ್ಲಿ ಊಟ ಮಾಡುವವರೆಗೂ ಬಿಡಲಿಲ್ಲ.

ಇನ್ನೊಂದು ನನ್ನ ಚಿಕ್ಕ ಉಪದೇಶ:
ಮೊನ್ನೆ ನನ್ನ ಇನ್ನೊಬ್ಬ ಸ್ನೇಹಿತ ರಘು ಹಾಗು ಅವರ ತಮ್ಮ ಮಹೇಶ ಅವರ ಮನೆಗೆ ಊಟಕ್ಕೆ ಬಲವಂತವಾಗಿ ಕರೆದರು.
ನಾನು ಆಯ್ತು ಅಂದೇ.
ಹಾಗೆ ಅವರಿಗೆ ಒಂದು ಆದೇಶವನ್ನಿತ್ತೆ.
"ಲೋ, ನಾನು ಸ್ವಲ್ಪ ನಾಚಿಕೆ ಸ್ವಭಾವದವನು.
ನಾನು ನಿಮ್ಮ ಮನೆಯವರು ಊಟ ಬಡಿಸುತ್ತಿರುವಾಗ "ಸಾಕು ಸಾಕು" ಅಂತ ಇರ್ತೀನಿ.
ನೀವು "ಹಾಕಿಸ್ಕೊಳೋ ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಊಟ ಬಡಿಸಬೇಕು ಓಕೆನಾ ... ?" ಅಂದೇ.

ನೀವು ಕೂಡ ಅಸ್ಟೆ, ನಾನು ನಿಮ್ಮ ಮನೆಗೆ ಊಟಕ್ಕೆ ಬಂದರೆ "ಹಾಕಿಸ್ಕೊಳೋ, ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಬಡಿಸಬೇಕು.. ಓಕೆ ನಾ ? :P ಹ್ಹಾ ಹ್ಹಾ ಹ್ಹಾ.... :D
Share/Save/Bookmark

Wednesday, May 20, 2009

ಆಟೋಗ್ರಾಫ್

ಏಳೆಂಟು ವರ್ಷಗಳ ಹಿಂದಿನ ಘಟನೆ. ಒಂದು ಪ್ರಖ್ಯಾತ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವಿತ್ತು. ಸಮಾರಂಭ ವೀಕ್ಷಿಸಲು ಬಹಳ ಜನರನ್ನು ಅವ್ಹಾನಿಸಿದ್ದರು.
ಹಾಗಾಗಿ ನಮಗೂ, ನಮ್ಮ ಅಕ್ಕ ಪಕ್ಕದ ಮನೆಯವರಿಗೂ ಆಮಂತ್ರಣ ಸಿಕ್ಕಿತ್ತು.
ಕಾರ್ಯಕ್ರಮಕ್ಕೆ ತೆಲುಗಿನ ಕಿರುತೆರೆ ನಿರೂಪಕಿ ಉದಯಭಾನು ಅವರು ಮುಖ್ಯ ಅಥಿತಿಯಾಗಿ ಬರುತ್ತಿರುವುದಾಗಿ ಪ್ರಕಟಿಸಿದ್ದರು.
ನಮ್ಮೂರು ಕಡೆ ಕನ್ನಡ ಹಾಗು ತೆಲುಗು ಎರಡು ಭಾಷೆಯ ಕಿರುತೆರೆಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಉದಯಭಾನು ನಮ್ಮ ಕಡೆ ಚಿರಪರಿಚಿತ.
ನಾನು, ನನ್ನ ತಮ್ಮ, ಪಕ್ಕದ ಮನೆಯ ನನ್ನ ತಮ್ಮನ ಸ್ನೇಹಿತ ಮಲ್ಲಿ (ಮಲ್ಲಿಕಾರ್ಜುನ) ಹಾಗು ಇನ್ನು ಕೆಲವು ಸ್ನೇಹಿತರು ಸೇರಿ ಕಾರ್ಯಕ್ರಮ ವೀಕ್ಷಿಸಲು ಹೊರೆಟೆವು. ಹೆಚ್ಚು ಕಮ್ಮಿ ನಾವು ಹೋಗಿದ್ದು ಉದಯಭಾನು ನೋಡಲು ಅನ್ಕೊಳ್ಳಿ. :P
ಕಾರ್ಯಕ್ರಮ ಶುರು ಆಯ್ತು. ಉದಯಭಾನು ಕೂಡ ಬಂದಿದ್ರು.
ಶಾಲೆಯ ಮಕ್ಕಳ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ಎಲ್ಲ ಚನ್ನಾಗಿ ನಡೆಯಿತು.
ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಉದಯಭಾನು ವಾಪಸ್ ಹೊರಡಲು ತಮ್ಮ ಕಾರಿನತ್ತ ಹೋಗುತ್ತಿದ್ದರು. ಆಟೋಗ್ರಾಫ್ ಪಡೆಯಲು ಅವಳ ಹಿಂದೆ ಜನರು ಓಡಿದರು. ಅಸ್ಟರಲ್ಲಿ ನಮ್ಮ ಮಲ್ಲಿ, ತಾನು ಕೂಡ ಆಟೋಗ್ರಾಫ್ ತಗೊಂಡು ಬರ್ತೀನಿ ಅಂದ. ಅವನ ಹತ್ರ ಪೆನ್ನು ಮಾತ್ರ ಇತ್ತು. ಪೇಪರ್ ಇರ್ಲಿಲ್ಲ. ನನ್ ಹತ್ರ ಚಿಕ್ಕ ಟೆಲಿಫೋನ್ ಡೈರಿ ಇತ್ತು. ಸರಿ ಅದನ್ನೇ ತೆಗೆದುಕೊಂಡು ಓಡಿದ.
ಸ್ವಲ್ಪ ಸಮಯದ ಬಳಿಕ ಹಿಂತಿರಿಗಿದ. ನಮಗೆಲ್ಲ ಅವಳ ಆಟೋಗ್ರಾಫ್ ತೋರಿಸಿದ. "With Love, Udayabhanu" ಅಂತ ಇತ್ತು.
ಅಸ್ಟು ಜನರಿದ್ದರೂ, ಅವರ ಮಧ್ಯ ತೂರಿ ಆಟೋಗ್ರಾಫ್ ತಗೊಂಡು ಬಂದೆಯಲ್ಲ, ಶಹಬಾಶ್ ಎಂದು ಹೊಗಳಿದೆವು. ಅವನು ಕೂಡ ಹರ್ಷದಿಂದ ಬೀಗಿದ.
ಎಲ್ಲ ಮುಗಿಸಿಕೊಂಡು ಮನೆಗೆ ಹೋದೆವು.
ಮರುದಿನ ಬೆಳಿಗ್ಗೆ ನಾನು ಒಬ್ಬನೇ ಇದ್ದಾಗ ಮಲ್ಲಿ ನಮ್ಮ ಮನೆಗೆ ಬಂದು ಮಾತಾಡಿಸುತ್ತ ನಿಮಗೊಂದು ಹೇಳ್ಬೇಕು ಅಂದ.
ಏನೋ ? ಅಂದೆ.
ಆಗ ಅವನು : "ನಿನ್ನೆ ಆಟೋಗ್ರಾಫ್ ತಗೊಳೋಕೆ ಓಡಿ ಹೋದ್ನಾ ?,
ನಾನು ಹೋಗುವುದರೊಳಗಾಗಿ ಉದಯಭಾನು ಹೋಗಿಬಿಟ್ಟಿದ್ರು.
ಆಟೋಗ್ರಾಫ್ ಇಲ್ಲದೆ ಹಿಂತಿರುಗಿದರೆ ನೀವೆಲ್ಲ ಅಪಹಾಸ್ಯ ಮಾಡ್ತೀರಿ ಅಂತ,
ನಾನೆ "With Love, Udayabhanu" ಅಂತ ಬರೆದುಕೊಂಡು ಬಂದೆ."
Share/Save/Bookmark

Tuesday, May 19, 2009

ಲಕುಲಾ ಭೂಕಂಪದ ನಂತರ



ಕೆಲವು ದಿನಗಳ ಹಿಂದೆ ಲಕುಲಾ ನಗರದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ "ದೇವರಲ್ಲಿ ಪ್ರಾರ್ಥಿಸುತ್ತೇನೆ" ಲೇಖನದಲ್ಲಿ ಹೇಳಿದ್ದೆ.
ನನ್ನ ಸ್ನೇಹಿತರು ಕೆಲಸಕ್ಕೆ ಮರಳಿದ್ದಾರೆ.
ನನ್ನ ಸ್ನೇಹಿತ ರಫೆಲ್ಲೊ (Raffaello) ಭೂಕಂಪದಿಂದಾದ ಅನಾಹುತಗಳ ಚಿತ್ರಗಳನ್ನು ಕಳಿಸಿದ್ದ.
ಅವನ ಒಪ್ಪಿಗೆಯೊಂದಿಗೆ ಚಿತ್ರಗಳನ್ನು ನಿಮಗಾಗಿ ಪ್ರಕಟಿಸುತ್ತಿದ್ದೇನೆ.

ಚಿತ್ರಗಳನ್ನು ಪಿಕಾಸದಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ
Share/Save/Bookmark

Tuesday, May 12, 2009

ಸವಾರಿ



ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ.
"ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? "
ರಮೇಶ್: "ಶಿವಾಜಿನಗರ್ ಕಡೆಯಿಂದ ಹೋಗ್ತಾ ಇದೀನಿ.. "
ಉಲ್ಲಾಸ್: "ನಾನು ನಿನ್ ಜೊತೆ ಬರ್ತೀನಿ. ಶಿವಾಜಿನಗರ್'ಗೆ ಹೋಗ್ಬೇಕು."
ರಮೇಶ್: "ಸರಿ, ಹೋಗೋಣ ಬಾ.."

ಹತ್ತಿರದ ಹೋಟೆಲ್ಲಿನಲ್ಲಿ ಟಿಫಿನ್ ಮಾಡಿ ರಮೇಶ್ ಬೈಕ್ ಹತ್ತಿ, ಅವನನ್ನು ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಹೊರಟ.
ದಾರಿಯಲ್ಲಿ ಒಂದು ಕುಣಿ ಬಂದಾಗ ಜೋರಾಗಿ ಬೈಕನ್ನು ಎಗ್ಗರಿಸಿದ.
ಜೋರಾಗಿ ಬೈಕ್ ಹೊಡೆಯುತ್ತಿದ್ದ ರಮೇಶನಿಗೆ, ನಿಧನಾವಾಗಿ ಓಡಿಸೋ ಅಂತ ಉಲ್ಲಾಸ ಕೇಳಿಕೊಂಡ.

ಹೋಗುತ್ತಿರುವಾಗ ದಾರಿಯಲ್ಲಿ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ನ ಒಳ ನಡೆದು, ಪೆಟ್ರೋಲ್ ಹಾಕಿಸಿದ.
ಮತ್ತೆ, ಸವಾರಿ ಹೊರಟಿತು...
ಜೋರಾಗಿ ಓಡಿಸಿತ್ತಿದ್ದ...
೬ ಕಿಲೋಮೀಟರು ಚಲಸಿದ ಬಳಿಕ, ಒಂದು ದೊಡ್ಡ ಕುಣಿ ಬಂತು. ಅದನ್ನು ನೋಡದೆ ಮತ್ತೆ ಜೋರಾಗಿ ಎಗ್ಗರಿಸಿದ..
ಆಗ ರಮೇಶ್, ಉಲ್ಲಾಸನ ಉದ್ದೇಶಿಸಿ "ಸಾರೀ ಮಗ, ಕುಣಿ ಕಾಣಲಿಲ್ಲ, ಎಗ್ಗರಿಸಿಬಿಟ್ಟೆ" ಎಂದು ಕ್ಷೆಮೆ ಕೇಳಲು ಹಿಂತಿರಿಗಿದ...
ಹಿಂದೆ ಉಲ್ಲಾಸ ಇಲ್ಲ...
ಆಯ್ಯೋ ದೇವರೇ...
ಎಲ್ಲಿ ಬಿದ್ದನೋ ಉಲ್ಲಾಸ ?.ಅಂತ ಹಿಂತಿರಿಗಿ ನೋಡಿದ. ಅಲ್ಲೆಲ್ಲೂ ಅವನಿಲ್ಲ.
ಎಲ್ಲಿ ಹೋದ ಮಾರಾಯ. ಅಂತ ಅವನ ಮೊಬೈಲ್ಗೆ ಕರೆ ಮಾಡಲು ಮೊಬೈಲ್ ಹೊರ ತೆಗೆದ.
ನೋಡಿದರೆ ೩ missed calls. ಅದು ಉಲ್ಲಸಾನಿಂದ.
ತಿರಿಗಿ ಉಲ್ಲಾಸನ ಮೊಬೈಲ್ ಗೆ ಕರೆ ಮಾಡಿದ....
ರಮೇಶ್: "ಲೋ, ಎಲ್ಲಿದಿಯೋ ?"
ಉಲ್ಲಾಸ್: "ಮಗನೆ, ಪೆಟ್ರೋಲ್ ಬಂಕ್ ಹತ್ರ ಇದೀನಿ. ನೀನು ಪೆಟ್ರೋಲ್ ಹಾಕಿಸುವಾಗ ನಾನು ಕೆಳಗಡೆ ಇಳಿದಿದ್ದೆ.. ನಾನು ಅತ್ತ ಕಡೆ ನೋಡುವಾಗ, ಇತ್ತ ನೀನು ಮಾಯಾ... ದೊಡ್ಡ ನಮಸ್ಕಾರ ನಿನಗೆ... ಇನ್ನೊದು ಬಾರಿ ನಿನ್ನ ಬೈಕ್ನಲ್ಲಿ ಬರಲ್ಲಾ ಗುರು. ಇನ್ನೇನು ಮಾಡೋದು, ಬಡವರ ಬಂಧು BMTC ಹತ್ತಿ ಹೊರಡ್ತಾ ಇದೀನಿ.. ಚನ್ನಾಗಿ ಡ್ರಾಪ್ ಮಾಡದಲ್ಲ, ತುಂಬಾ ಥ್ಯಾಂಕ್ಸ್....ಫೋನ್ ಇಡ್ತೀನಿ ಮಗ, BYE "
Share/Save/Bookmark

Thursday, April 23, 2009

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ..

ಮೊನ್ನೆ ನನ್ನ ಗೆಳೆಯ ಗಣೇಶ್, ನನಗೊಂದು ಲಿಂಕ್ ಕಳಿಸಿ, ಆ ಹಾಡು ಕೇಳು ಅಂದ..
ನಾನು ಸರಿ ಅಂತ ಕೇಳಿದೆ..
ನೀವು ಆ ಹಾಡನ್ನು ಕೇಳಿರಬಹುದು,
ಆದರೆ ನಾನು ಕೇಳಿದ್ದು ಇದೆ ಮೊದಲ ಸಾರಿ... ನನಗಂತೂ ತುಂಬ ಇಷ್ಟ ಆಯ್ತು.. ಕೇಳಿರದವರು ಕೇಳಿ ಆನಂದಿಸಿ...

Get this widget | Track details | eSnips Social DNA

ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….

ಇದರ ವೀಡಿಯೊ ನೋಡಲು ಇಲ್ಲಿ ಕ್ಲಿಕ್ಕ್ಕಿಸಿ

ಕೃಪೆ :
http://www.kannadalyrics.com
http://www.esnips.com
http://www.videogirmit.com
Share/Save/Bookmark

Saturday, April 18, 2009

ಮಳೇಲಿ ನೆನದದ್ದು ನೆನಪಿಡುವೆ...................


ಟೈಟಲ್ ನೋಡಿ ಒಳ್ಳೆ ಲವ್ ಸ್ಟೋರಿ ಇರಬೇಕು ಅನ್ಕೊಂಡ್ರಾ ?...
ಇದು ಲವ್ ಸ್ಟೋರಿನೆ ಆದ್ರೆ ಇಲ್ಲಿ ಹುಡುಗಿ ಇಲ್ಲ, ಇರೋದು ಮಳೆ......

ಮಳೆಗೂ ನನಗೂ ಎಲ್ಲಿಲ್ಲದ ಸಂಬಂಧ ಅನ್ಸುತ್ತೆ. ಮಳೇಲಿ ನೆನೆಯೋದು ಅಂದ್ರೆ ನನಗೆ ತುಂಬಾ ಇಷ್ಟ. ಆದ್ರೆ ಏನ್ ಮಾಡೋದು ಕೆಲವೊಂದು ಸಾರಿ ಇದೇ ಮಳೆಯಿಂದ ತೊಂದರೆ ಅನುಭವಿಸಿದ್ದು ಉಂಟು.

ಮೈಸೂರಿನಲ್ಲಿ ಓದ್ತಾ ಇದ್ದಾಗ...........
ನಾನು ರಾತ್ರಿಯ ಊಟಕ್ಕೆ ಸುಮಾರು ಕಿಲೋಮೀಟರು ದೂರದಲ್ಲಿದ್ದ ಒಂದು ಮೆಸ್ (mess) ಗೆ ಹೋಗ್ತಾ ಇದ್ದೆ. ಅದೇನೋ ಬೇರೆ ಕಡೆ ಊಟ ನನಗೆ ಅಸ್ಟು ಇಷ್ಟ ಆಗ್ತಾ ಇರ್ಲಿಲ್ಲ, ಹಾಗಾಗಿ ಅಲ್ಲೇ ಹೋಗಿ ಊಟ ಮಾಡಿ ಬರ್ತಿದ್ದೆ.
ಹೋಗಿ ಬರಲು ಸೇರಿ ಕಿಲೋಮೀಟರು ದೂರ. ಅಸ್ಟು ದೂರ ನಡಿದು ಹೋಗ್ತಾ ಇರ್ಲಿಲ್ಲ, ಹಾಗೇನಾದ್ರೂ ನಡೆದು ಹೋಗಿ ತಿಂದು ಬರೋದ್ರಲ್ಲಿ ಮತ್ತೆ ಹೊಟ್ಟೆ ಹಸಿಯೋದು ಗ್ಯಾರಂಟೀ. ಹಾಗಾಗಿ ಬೈಕನಲ್ಲೇ ಹೋಗ್ತಾ ಇದ್ದೆ.
ಮೈಸೂರಿನಲ್ಲಿ ಮಳೆಗಾಲ ಬಂದ್ರೆ ಸಾಕು ಮಳೆರಾಯನದೇ ದರ್ಬಾರು. ರಾತ್ರಿ ಊಟದ ಸಮಯಕ್ಕೆ ಸರಿಯಾಗಿ ಮಳೆ ಬರ್ತಿತ್ತು. ಏನ್ ಮಾಡೋದು ?... ಹೊಟ್ಟೆ ಹಸಿವು, ಮೆಸ್ ಬಿಟ್ರೆ ಬೇರೆ ಹೋಟೆಲ್ ಇಷ್ಟ ಇಲ್ಲ.
ಅದೇ ಮಳೆಯಲ್ಲೇ ಸ್ನಾನ ಮಾಡ್ತಾ ಹೋಗ್ತಾ ಇದ್ದೆ. ನೆನೆದ ಬಟ್ಟೆಯಲ್ಲಿ ಕೂತು ಊಟ ಮಾಡಿ, ಅದೇ ಮಳೆಯಲ್ಲಿ ಮರಳಿ ಸ್ನಾನ ಮಾಡುತ್ತ ಮರುಳುತ್ತಿದ್ದೆ. ಹೀಗೆ ಕಡಿಮೆ ಅಂದ್ರು ದಿನಕ್ಕೆ ಮೂರು ಸಾರಿ ಸ್ನಾನ. ಒಮ್ಮೊಮ್ಮೆ ಬೈಕ್ ಓಡಿಸುವಾಗ ದಾರಿನೇ ಕಾಣಿಸ್ತಾ ಇರ್ಲಿಲ್ಲ, ಕಣ್ಣು ತರೆಯೋದು ಕಷ್ಟ, ಅಸ್ಟು ಮಳೆ. ಆಗ ಹೆಲ್ಮೆಟ್ ಕಡ್ಡಾಯ ಇರ್ಲಿಲ್ಲ ಹಾಗಾಗಿ ತಲೆ ಮೇಲೆ ಬೇಳುವ ಒಂದೊಂದು ಹನಿ, ಸಣ್ಣ ಕಲ್ಲು ಬಿದ್ದ ಹಾಗೆ ಬಿಳ್ತಾ ಇತ್ತು. ಕೆಲೋವೊಂದು ಸಾರಿ ಮರದ ಸಣ್ಣ ಪುಟ್ಟ ವಯಸ್ಸಾದ ಕೊಂಬೆಗಳು ಸಹ ಬಿಳ್ತಾ ಇದ್ವು. ಪುಣ್ಯ ಚಿಕ್ಕ ಕೊಂಬೆಗಳು ಬಿಳ್ತಾ ಇದ್ವು, ದೊಡ್ದದೆನದ್ರು ಬಿದ್ದಿದ್ರೆ.... ?.........
ನೆನದ ಬಟ್ಟೆಗಳು ಎರೆಡೆರೆಡು ದಿನಗಳು ಕಳೆದರು ಒದ್ದೆಯಾಗಿಯೇ ಇರ್ತಾ ಇದ್ವು, ಹಿಡಿದ ಮಳೆ ಬಿಡ್ತಾನೆ ಇರ್ಲಿಲ್ಲ ಅಲ್ವಾ.....
ರೇನ್ ಕೊಟ್ ಹಾಕಬೇಕಿತ್ತು ಅಂತಿರಾ ?.. ಹಾಕಬಹುದಿತ್ತು, ಆದ್ರೆ ನನಗೆ ಹಾಕೋಕೆ ಇಷ್ಟ ಇಲ್ಲ, ಅದು ಅಲ್ದೆ ಮಳೇಲಿ ನೆನೆಯೋದು ಅಂದ್ರೆ ನನಗೆ ಇಷ್ಟ ಅಲ್ವಾ...
ಮಳೇಲಿ ನೆನದ ದಿನಗಳು ಸೂಪರ್ ರೀ ....

ಇನ್ನು, ಬೆಂಗಳೂರಿನಲ್ಲಿ,..........
ಒಂದು ದಿನ ಬೆಳಿಗ್ಗೆ ಲೇಟ್ ಆಗಿ ಎದ್ದಿದ್ದೆ. ಹಾಗಾಗಿ, ಆಫೀಸಿಗೆ ತುರಾತುರಿಯಲ್ಲಿ ರೆಡಿ ಆಗಿ, ರೇನ್ ಕೊಟ್ ಮರೆತು ಬೈಕ್ ಹತ್ತಿ ಹೊರಟೆ. ಮನೆ ಬಿಡುವಾಗ ಮಳೆ ಬರ್ತಾ ಇರ್ಲಿಲ್ಲ, ಬಿಸಿಲು ಕೂಡ ಇತ್ತು. ಹಾಗಾಗಿ ರೇನ್ ಕೊಟ್ ನೆನಪು ಕೂಡ ಆಗ್ಲಿಲ್ಲ.
ಸರಿ, ಒಂದೆರೆಡು ಕಿಲೋಮೀಟರು ಚಲಿಸಿದ ಬಳಿಕ, ಇದ್ದಕ್ಕಿದ್ದ ಹಾಗೆ ಬಿಸಿಲು ಮರೆಯಾಗಿ ಮೋಡ ಮುಚ್ಚಿತು, ಹಾಗೆ ಮಳೆ ಕೂಡ ಜೋರಾಗಿ ಬೀಳ ಹತ್ತಿತು. ಬೈಕ್ ನಿಲ್ಲಿಸಲು ರಸ್ತೆ ಪಕ್ಕದಲ್ಲಿ ಒಂದು ಸೂರನ್ನು ಹುಡುಕಿದೆ, ಆದರೆ ಎಲ್ಲೆಲ್ಲು ರಸ್ತೆಯ ಪಕ್ಕದಲ್ಲಿ ಒಂದು ಸೂರು ಕಾಣಲಿಲ್ಲ. ವಿಧಿಯಿಲ್ಲದೆ ಮಳೆಯಲ್ಲೇ ನೆನೆದು ಆಫೀಸ್ ತಲುಪಿದೆ. ಆಫೀಸ್ ತಲುಪಿದಾಗ ನನ್ನ ಬಟ್ಟೆಯಲ್ಲಾ ಸಂಪೂರ್ಣವಾಗಿ ತೋಯ್ದು ಹೋಗಿತ್ತು.
ಆಫೀಸ್ ಹೊರಗಡೆ ನಿಂತು, ನೆನದ ಬಟ್ಟೆಯಲ್ಲಿ ಒಳಗಡೆ ಹೇಗೆ ಹೋಗಲಿ ?
ಅದಕ್ಕಿಂತ ಆಫೀಸಿಗೆ ರಜೆ ಹಾಕಿ ಅದೇ ಮಳೆಯಲ್ಲಿ ವಾಪಸ್ಸು ಮನೆಗೆ ಮರುಳಲಾ? ವಾಪಾಸ್ ಹೋದರೆ ಇಲ್ಲಿಯವರಗೆ ಬಂದಿದ್ದು ವ್ಯರ್ಥ ಆಗಿ ಬಿಡತ್ತೆ...
ಎಂತಾ ಮಾಡುವುದು ? ಆಫೀಸ್ ಹೊರಗಡೆ ಆಲೋಚಿಸುತ್ತ ನಿಂತೆ.
ಆಫೀಸಿಗೆ ಹತ್ತಿರದಲ್ಲಿದ್ದ ಒಂದು ಬಟ್ಟೆ ಅಂಗಡಿ ಕಾಣಿಸಿತು. ಬಟ್ಟೆ ಅಂಗಡಿಗೆ ಹೋದೆ, ಅಲ್ಲಿ ಹೊಸ ಬಟ್ಟೆಗಳನ್ನು ಕೊಂಡೆ.
ಪುಣ್ಯ ತಿಂಗಳ ಕೊನೆಯಾಗಿರದುದ್ದರಿಂದ ಕೈಯಲ್ಲಿ ಹಣ ಇತ್ತು. ಹೊಸ ಬಟ್ಟೆಗಳನ್ನು ಹಾಕಿಕೊಂಡು, ಒದ್ದೆಬಟ್ಟೆಗಳನ್ನು ಪ್ಲಾಸ್ಟಿಕ್ ಚೀಲಾದಲ್ಲಿ ಇಟ್ಟುಕೊಂಡು, ಆಫೀಸಿಗೆ ಬಂದೆ.
ಅಂತು ವದ್ದೆ ಬಟ್ಟೆಗಳು, ಮನೆ ಸೇರುವವರೆಗೂ ಪ್ಲಾಸ್ಟಿಕ್ ಚೀಲಾದಲ್ಲಿ ಸಮಾಧಿಯಾಗಿದ್ದವು. ಮನೆಗೆ ಹೋದ ಮೇಲೆಯೇ ಬಟ್ಟೆಗಳ ಆತ್ಮಕ್ಕೆ ಜೀವ ಬಂದಿದ್ದು.

ಆಫೀಸಿನ ಒಳ ಹೋದಾಗ ನನ್ನ ಮನವೇಕೊ ದುನಿಯಾ ಚಿತ್ರದ " ಪಾಪಿ ದುನಿಯಾ" ಹಾಡಿನ ಸಾಲುಗಳನ್ನು ಹಾಡುತ್ತಿತ್ತು...
"ಮು೦ಜಾನೆವರೆಗೂ ಸೋನೆ ಸುರಿದ ದಿನಾ೦ಕ ಗುರುತಿಡುವೇ,
ಮಳೇಲಿ ನೆನದದ್ದು ನೆನಪಿಡುವೆ..................."

ಇನ್ನು ಬಹಳಷ್ಟು ಮಳೇಲಿ ನೆನದ ನೆನಪುಗಳು ಇದಾವೆ,
ನಿಮಗೆ ಈ ಲೇಖನ ಇಷ್ಟ ಆದರೆ, ಆ ನೆನಪುಗಳನ್ನು ಬರೀತೀನಿ.........
Share/Save/Bookmark

Monday, April 13, 2009

ದೇವರಲ್ಲಿ ಪ್ರಾರ್ಥಿಸುತ್ತೇನೆ



ನಮ್ಮ ಕಂಪನಿ ತರ ಇನ್ನೆರೆಡು ಕಂಪನಿಗಳು ಒಂದೇ ಕ್ಲಾಯೆಂಟ್ ಕಂಪೆನಿಗೆ ಕೆಲಸ ಮಾಡುತ್ತೆ. ಆ ಇನ್ನೆರೆಡು ಕಂಪನಿಗಳು ಇಟಲಿಯಲ್ಲಿವೆ. ಒಂದು ರೋಮ್, ಇನ್ನೊಂದು ಲಕುಲಾ ನಗರದಲ್ಲಿವೆ.
ನನಗೆ ಇ ಎರಡು ಕಂಪನಿಯಲ್ಲಿ ಕೆಲಸ ಮಾಡುವ ೧೫ ಜನ ಸ್ನೇಹಿತರಿದ್ದಾರೆ.
ಲಕುಲಾ ನಗರದಲ್ಲಿರುವ ಕಂಪೆನಿಯಿಂದ ೫, ರೋಮ್ ನಲ್ಲಿರುವ ಕಂಪೆನಿಯಿಂದ ೧೦ ಜನ ಸೇರಿ ಒಂದೇ ಪ್ರಾಜೆಕ್ಟನಲ್ಲಿ ಕೆಲಸ ಮಾಡುತ್ತೇವೆ. ನಾವು ಒಬ್ಬರಿಗೊಬ್ಬರು ತುಂಬಾ ಆತ್ಮಿಯರಾಗಿದ್ದೇವೆ.
ಮೊನ್ನೆ ಏಪ್ರಿಲ್ ಆರನೇ ತಾರೀಕು ಸಂಭಾವಿಸಿದ ಭೂಕಂಪದಲ್ಲಿ ಲಕುಲಾ ನಗರ ನೆಲಕಚ್ಚಿದೆ. ಅಲ್ಲಿ ಬಹಳಷ್ಟು ಮನೆಗಳು ನೆಲಕ್ಕುರುಳಿವೆ. ಸುಮಾರು ೨೦೦ಕ್ಕು ಹೆಚ್ಚು ಪ್ರಾಣಹಾನಿ ಸಂಭವಿಸಿದೆ. ನಮ್ಮ ೫ ಜನ ಹಾಗು ಅವರ ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಿನಿದ ಲಕುಲಾ ನಗರದಿಂದ ಯಾರು online ಬಂದಿರಲಿಲ್ಲ. ಇಂದು ಸಾಯಂಕಾಲ ಅವರಲ್ಲಿ ಒಬ್ಬ online ಬಂದಿದ್ದ. ನನ್ನ ಜೊತೆ ಸಂಭಾಷಣೆ ನಡೆಸಿದ. ಅವನು ನಡೆದ ಘಟನೆ ವಿವರಿಸಿದ್ದು ಹೀಗೆ :
"ಹಾಯ್ ಶಿವ,
ಇಲ್ಲಿ ಭೂಕಂಪ ಸಂಭವಿಸಿ ತುಂಬಾ ಹಾನಿಯಾಗಿದೆ. ಇದು ಸಾಮನ್ಯ ಭುಕಂಪವಲ್ಲ. ನಮ್ಮ ಎಲ್ಲರ ಮನೆಗಳು ನೆಲಕ್ಕುರುಳಿವೆ. ನಮ್ಮ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾವು ಎಲ್ಲವನ್ನು ಕೆಳೆದುಕೊಂಡಿದ್ದೇವೆ. ನಾವು ಈಗ ನಮ್ಮ ಕಾರಿನಲ್ಲಿ ಜೀವನ ನಡೆಸುತ್ತಿದ್ದೇವೆ. ನಮ್ಮ ಕಂಪನಿ ನಡೆಸುತ್ತಿದ್ದ ವ್ಯಕ್ತಿಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ವ್ಯಕ್ತಿ ಬಹಳಷ್ಟು ಕಳೆದುಕೊಂಡಿದ್ದಾನೆ. ನಮ್ಮ ಆಫೀಸ್ ಕಟ್ಟಡ ಕೂಡ ಬಿದ್ದು ಹೋಗಿದೆ. ಇನ್ನು ವ್ಯಕ್ತಿ ಕಂಪನಿ ನಡೆಸುವುದು ಸಂಶಯವಾಗಿದೆ. ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ.
ನಾವು ಚಿಕ್ಕ ಮನೆ ಕಟ್ಟಲು ಕನಿಸ್ಟ ತಿಂಗಳಾದರೂ ಬೇಕು, ಅದು ನಮ್ಮ ಸರಕಾರ (Govt) ಸಹಾಯ ಮಾಡಿದಲ್ಲಿ.
ನಾವು ಕೆಲಸಕ್ಕೆ ಎಂದು ಮರುಳುತ್ತೆವೋ ಗೊತ್ತಿಲ್ಲ.
ಅದೇನೋ ಗೊತ್ತಿಲ್ಲ ಶಿವ, ದುಃಖದ ಸಂದರ್ಭದಲ್ಲಿ ನಿನ್ನ ಜೊತೆ ಮಾತನಾಡಿದಾಗ ನನಗೆ ವಿಶೇಷವಾದ ಆನಂದ ಆಗಿದೆ. ಧನ್ಯವಾದಗಳು ಶಿವ"

ನನಗೂ ತುಂಬಾ ದುಖವಾಯಿತು. ನಾನು ಸಾಂತ್ವನ ಹೇಳುವಸ್ಟು ದೊಡ್ಡವನಲ್ಲ. ಆದರೆ ಸಣ್ಣ ಸಮಾಧಾನದ ಮಾತುಗಳನ್ನಡಿದೆ. ಆದಸ್ಟು ಬೇಗ ಅವರು ಕೆಲಸಕ್ಕೆ ಮರುಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಆದೇಕೋ ನನಗೂ ಕೂಡ ಈ ವಿಷಯವನ್ನು ನಿಮ್ಮಲ್ಲಿ ಹೇಳಿಕೊಳ್ಳುವ ಮನಸ್ಸಾಯಿತು. ಅದಕ್ಕೆ ಹೇಳಿಕೊಂಡಿದ್ದೇನೆ.
Share/Save/Bookmark

Thursday, April 9, 2009

ನಾನೊಬ್ಬ ಸಸ್ಯಹಾರಿ...



ಈ ಚಿತ್ರದ ಹಿಂದೆ ಒಂದು ಸಣ್ಣ ಕಥೆ ಇದೆ.
ನನಗೆ ಇತರ ಒಂದು ಫೋಟೋ ತೆಗಿಸ್ಗೋಳೋ ಆಸೆಯಾಯಿತು. ಆದರೆ ನಾನು ಇಂದಿನವರೆಗೂ ಮೀನನ್ನು ಕೈಯಿಂದ ಮುಟ್ಟಿಲ್ಲ.
ಮತ್ತೆ?, ಈ ಚಿತ್ರದಲ್ಲಿ ಹಿಡಿದಿದ್ದಿಯಲ್ಲ ಅನ್ನುತ್ತೀರಾ ?
ಇಲ್ಲ ರೀ, ನಾನು ಹಿಡಿದಿಲ್ಲ.
ಅದನ್ನು ಹಿಡಿದಿದ್ದು ನನ್ನ ಗೆಳೆಯ ನಟ.
ಫೋಟೋ ಕ್ಲಿಕ್ಕ್ಕಿಸಿದ್ದು, ನನ್ನ ಇನ್ನೊಬ್ಬ ಗೆಳೆಯ ಪವನ್.
ನಾನು ಕೊಟ್ಟಿದ್ದು ಬರಿ ಫೋಸ್ ಅಸ್ಟೆ...
ಮೀನು ನನ್ನ ಬಾಯಿಗೆ ನೇರವಾಗಿ ಇಲ್ಲ , ಅದು ನನ್ನ ಬಾಯಿಯ ಬಲಗಡೆಗೆ ಇದೆ..
ಚನ್ನಾಗಿದೆ ಅಲ್ವಾ ?
Share/Save/Bookmark

Tuesday, April 7, 2009

ಮೊದಲಸಲ....



ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಹೊಸ ಪ್ರಾಜೆಕ್ಟಿನ ವಿಷಯವಾಗಿ ಇಟಲಿ ದೇಶದ ಗ್ರಾಹಕನ ಜೊತೆ ಟೆಕ್ಸ್ಟ್ ಚಾಟ್ (text chat) ಮಾಡಬೇಕಾಯಿತು. ಆ ವ್ಯಕ್ತಿಯ ಹೆಸರು "ಲೂಕಾ" ಅಂತ. ಸರಿ, ಟೆಕ್ಸ್ಟ್ ಚಾಟ್ ಮಾಡಲು ಶುರು ಮಾಡಿದೆ.
ನನ್ನ ಕಡೆಯಿಂದ "ಹಲೋ ಸರ್" ಅಂತ ಕಳಿಸಿದೆ.
ಅ ಕಡೆಯಿಂದ "ನಾನು ಸರ್ ಅಲ್ಲ" ಎನ್ನುವ ಉತ್ತರ ಬಂತು.
(ಒಹ್!!! ಅವರು ಹೆಂಗಸೋ, ಗಂಡಸೋ ತಿಳಿಯದೆ ಸರ್ ಅಂದುಬಿಟ್ಟೆ. ಅವರು ಹೆಂಗಸು ಇರಬೇಕು ಎಂದುಕೊಳ್ಳುತ್ತ, ಕ್ಷಮೆ ಯಾಚಿಸಲು ಮತ್ತೊಂದು ಸಂದೇಶ ಕಳಿಸಿದೆ.)
ನಾನು ಆಗ "ಸಾರೀ ಮೇಡಂ" ಅಂದೇ..
ಆಗ ಆ ಕಡೆಯಿಂದ "ನಾನು ಮೇಡಂ ಅಲ್ಲ"
(ನನಗ್ಯಾಕೋ ಕಸಿವಿಸಿಯಾಯಿತು, ಇದೇನಪ್ಪ, ಅತ್ತ ಸರ್ ಅಲ್ಲ, ಇತ್ತ ಮೇಡಂ ಅಲ್ಲ... ತೆಲೆಕೆಡಿಸಿಕೊಳ್ಳುತ್ತ ಕೂತೆ..,
ಸ್ವಲ್ಪ ಸಮಯದ ಬಳಿಕ, ಆ ಕಡೆಯಿಂದ ಇನ್ನೊದು ಸಂದೇಶ ಬಂತು..)
ಆ ಕಡೆಯಿಂದ: "ನಾನು ಸಾರ್ ಅಲ್ಲ, ಮೇಡಂ ಅಲ್ಲ, ನನ್ನ ಹೆಸರು ಲೂಕಾ ಅಂತ (ನಾನು ಗಂಡಸೇ), ನನ್ನ ಹೆಸರಿಡಿದೆ ಕರಿ. ನಾನು ನಿನ್ನ ಸ್ನೇಹಿತನಿದ್ದಂತೆ.."
ನನಗೆ ಆ ಮಾತನ್ನು ಕೇಳಿ ಸ್ವಲ್ಪ ನಗು ಬಂತು ಹಾಗೆ, ಆವರ ಅತ್ಮಿಯತೆಗೆ ತುಂಬಾ ಸಂತೋಷವು ಆಯ್ತು.
ಎರಡು ವರ್ಷಗಳಿಂದ ಅದೇ ಗ್ರಾಹಕನ ಜೊತೆ ಕೆಲಸ ಮಾಡ್ತಾ ಇದೀನಿ. ತುಂಬಾ ಒಳ್ಳೆ ಮನುಷ್ಯ. ಎಂದಿಗೂ ಆ ವ್ಯಕ್ತಿ ನನ್ನನ್ನು ಚಿಕ್ಕವನಂತೆ ಕಂಡಿಲ್ಲ,
ನನ್ನನ್ನು ಸ್ನೇಹಿತನಿಗಿಂತ ಹೆಚ್ಚಾಗಿ ಆತ್ಮಿಯತೆಯಿಂದ ಕಾಣುತ್ತಾನೆ.
ಇಂತ ಒಳ್ಳೆ ಗ್ರಾಹಕ,
ಕ್ಷಮಿಸಿ,
ಸ್ನೇಹಿತನನ್ನು ಪಡೆದ ನಾನು ಧನ್ಯ....
ಚಿರಕಾಲ ಇರಲಿ ಈ ಬಂಧ...

Share/Save/Bookmark

Monday, April 6, 2009

ಬಯಲಾಟವೋ ಹುಡುಗಾಟವೋ...!!!

ನಮ್ಮ ಚಿಕ್ಕಮ್ಮನ ಬಲವಂತಕ್ಕಾಗಿ ಮೊನ್ನೆ ಅವರ ಊರ ಜಾತ್ರೆಗೆ ಹೋಗಿದ್ದೆ. ಜಾತ್ರೆ ಅಂದ್ರೆ ಎಲ್ಲೆಲ್ಲು ಸಡಗರ ಸಂಭ್ರಮ. ನನ್ನ ಹಾಗೆಯೇ ನನ್ನ ಅಜ್ಜಿಯ ಮನೆಯವರು ಜಾತ್ರೆಗೆ ಬಂದಿದ್ದರು. ಜಾತ್ರೆ ತುಂಬಾ ಚನ್ನಾಗಿ ನಡಿತು. ಜಾತ್ರೆ ನಡೆದ ದಿನದ ರಾತ್ರಿ, ಬಯಲಾಟ (ರಾತ್ರಿ ಆಡುವ ನಾಟಕ) ಇತ್ತು. ನನಗೆ ಬಯಲಾಟ ನೋಡೋದು ಇಷ್ಟ, ಆದ್ರೆ ಏನ್ ಮಾಡೋದು ರಾತ್ರಿಯೆಲ್ಲಾ ಅದನ್ನು ನೋಡ್ತಾ ಕೂತರೆ ಮುರಿದಿನ ಏನು ಕೆಲಸ ಮಾಡೋಕೆ ಆಗೋಲ್ಲ. ಹಾಗಾಗಿ ನೋಡೋ ಧೈರ್ಯ ಮಾಡಲಿಲ್ಲ.

ಬೇಸಿಗೆಗಾಲ ಆದುದರಿಂದ, ಮನೆಯಲ್ಲಿ ಮಲಗೋಕೆ ಬಹಳ ಕಷ್ಟ.
ಹಾಗಾಗಿ ಮನೆಯ ಮೇಲೆ ಮಲಗೋದು ರೂಡಿ. ಬಯಲಾಟ ಅಂದ್ರೆ ಕೇಳಬೇಕೆ, ಜೋರಾಗಿ ಕೇಳಿಸುವ ಶಬ್ದ. ಅದು ಅಲ್ಲದೆ ಆ ಬಯಲಾಟ ನಡೀತಾ ಇದ್ದುದು ನನ್ನ ಚಿಕ್ಕಮ್ಮನ ಮನೆಯ ತುಂಬಾ ಹತ್ತಿರದಲ್ಲಿ. ಹಾಗಾಗಿ ಆ ಶಬ್ದಕ್ಕೆ ನಿದ್ದೆ ಬರುವುದು ದೊಡ್ಡ ವಿಷಯವೇ.

ನಮ್ಮ ಅಜ್ಜಿಯ ಮನೆಯ ಚಾಲಕ ಶಿವು ಕಾರಿನಲ್ಲಿ ಮಲುಗುತ್ತಿದ್ದುದನ್ನು ಕಂಡು, ಕಾರಿನಲ್ಲಿ ಏಕೆ ಮಲುಗುತಿ, ಮನೆಯ ಮೇಲೆ ಗಾಳಿ ಚನ್ನಾಗಿ ಬರುತ್ತೆ. ಅಲ್ಲೇ ಮಲಗು ಬಾ ಅಂದೇ. ಅವನು ಸರಿ ಅಂತ ನನ್ನ ಜೊತೆ ಬಂದು, ಮಹಡಿಯ ಮೇಲೆ ಮಲಗಿದ. ನಾನು ಸ್ವಲ್ಪ ಪ್ರಯಾಣ ಮಾಡಿ ದಣಿದಿದ್ದರಿಂದಲೋ ಏನೋ, ನನಗೆ ಬಯಲಾಟದ ಸ್ವಬ್ದ ಹೆಚ್ಚಾಗಿ ನಿದ್ದೆಗೆ ಅಡ್ಡಿಯಾಗಲಿಲ್ಲ. ಚನ್ನಾಗಿ ಕುಂಬಕರ್ಣ ನಿದ್ದೆ ಮಾಡಿದೆ.

ನಾನು ಬೆಳಿಗ್ಗೆ ಎದ್ದಾಗ ಸೂರ್ಯ ನನ್ನನ್ನು ಕುಕ್ಕಿ ಕುಕ್ಕಿ ನೋಡುತ್ತಿದ್ದ. ಬಹುಶ ನಾನು ಇನ್ನು ಮಲಗಿರುವುದನ್ನು ಕಂಡು ಅವನಿಗೆ ಹೊಟ್ಟೆಕಿಚ್ಚೋ ಏನೋ ?.
ಸರಿ ನಾನು ಎದ್ದಾಗ, ನನ್ನ ಕಣ್ಣ ಮುಂದೆ ಶಿವು ಬಂದು ಕೇಳಿದ, " ನಿಮಗೆ ರಾತ್ರಿ ನಿದ್ದೆ ಬಂತಾ ? "
ನಾನು ಚನ್ನಾಗಿ ಬಂತು ಕಣೋ, ಅದು ಸರಿ ಯಾಕೆ ಹಾಗೇ ಕೇಳಿದೆ ?
ಆಗ ಅವನು: " ರಾತ್ರಿ ಬಯಲಾಟದ ಶಬ್ದಕ್ಕೆ ಸರಿಯಾಗಿ ನಿದ್ದೆ ಬರಲಿಲ್ಲ, ಮದ್ಯ ಮದ್ಯ ಎಚ್ಚರವಾಗುತ್ತಿತ್ತು."
ನಾನು ಅಯ್ಯೋ ಪಾಪ ಅಂದೆ.
ಆಗ ಅವನು: ನಿಮಗೊಂದು ಮಜಾ ಗೊತ್ತೇ ?
ನಾನು: ಏನು ?
ಅವನು: "ರಾತ್ರಿ ಬಯಲಾಟ ನಡೆಯುವಾಗ, ನನಗೆ ಮದ್ಯ ಎಚ್ಚರವಾದಾಗ ಏನು ಕೂಗಿದರು ಗೊತ್ತೇ?, ದ್ರೋಪದಿಯ ಪಾತ್ರದಾರಿ ಎಲ್ಲೋ ಹೋಗಿರಬೇಕು ಅಂತ ಕಾಣಿಸುತ್ತೆ, ಅದಕ್ಕೆ ಅವಳನ್ನು ಪರದೆಯ ಹಿಂದೆ ಬರಹೇಳಲು ಮೈಕ್ ನಲ್ಲಿ ಕೊಗಿದ್ದು : ಅಮ್ಮ ದ್ರೋಪದಿ, ಯಾರ ಮನೆಯಲ್ಲಿ ಟೀ ಕುಡಿತಾ ಕೂತಿದಿಯಾ ? , ಬೇಗಾ ಬಾ, ಇಲ್ಲಿ ಕೌರವರು ವೇಟಿಂಗೂ (waiting) "

ಬಹುಶ ಕೌರವರು, ದ್ರೌಪದಿಯ ವಸ್ತ್ರಾಪಹರಣದ ದೃಶ್ಯಕ್ಕಾಗಿ ಕಾದಿದ್ದರೇನು ?....
ನಾನು ಅದನ್ನು ಕೇಳಿ ನಕ್ಕಿದ್ದೋ ನಕ್ಕಿದ್ದು...

Share/Save/Bookmark

Saturday, April 4, 2009

ಚಿತ್ರದುರ್ಗ ಪ್ರವಾಸ

ಚಿತ್ರದುರ್ಗದಲ್ಲಿರುವ ನನ್ನ ಸ್ನೇಹಿತರಾದ ಹನುಮಂತ (ಪ್ರೀತಿಯಿಂದ ಹನು) ಹಾಗು ಮಂಜು (ಕಡುವ) ಸುಜ್ಲಾನ್ (suzlon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಹಳದಿನದ ಕರೆಗೆ ಓಗೊಟ್ಟು ನಾಲ್ಕು ಸ್ನೇಹಿತರು ಸೇರಿ ಪ್ರವಾಸ ಬೆಳಿಸಿದೆವು.
ನಾನು ಪ್ರವಾಸದಲ್ಲಿ ಮಾಡಿದ ಮಜಾ ಹಾಗು ಅನುಭವಿಸಿದ ಸಂತೋಷ ಮಾತಿನಲ್ಲಿ ಹೇಳುವುದು ಸ್ವಲ್ಪ ಕಷ್ಟದ ಕೆಲಸ, ಹಾಗಾಗಿ ಚಿತ್ರಗಳು ಒಳಗೂಡಿದ ಈ ಲೇಖನ.

ದೇವಸ್ತಾನಕ್ಕೆ ಮೊದಲ ಬೇಟಿ.


ವಿದ್ಯುತ್ ಉತ್ಪಾದನೆಯ ಗಾಳಿಯಂತ್ರಗಳು (ವಿಂಡ್ ಪವರ್ - wind power)


೮೩ ಮೀಟರ್ ಎತ್ತರವಿರುವ ಗಾಳಿಯಂತ್ರ.
ಗಾಳಿಯಂತ್ರವನ್ನು ಹತ್ತಿರದಿಂದ ನೋಡಿದಾಗ, ಅದನ್ನು ಏರುವ ಮನಸಾಯಿತು. ಗೆಳೆಯನನ್ನು ಕೇಳಿದೆ. ಸರಿ ಹತ್ತೋಣ ಅಂದ. ಹತ್ತಲು ತನ್ನ ಸಹೋದ್ಯೋಗಿಯ ಗ್ಲೌಸ್ (hand glouse) ಹಾಗು ಬೂಟ್ (shoes) ಕೊಟ್ಟ. ನನ್ನ ಜೊತೆಗೆ ಅವರು ಕೂಡ ಹತ್ತಿದರು.


ಗಾಳಿಯಂತ್ರದ ಒಳನೋಟ. ಹತ್ತಲು ಇರುವ ಏಣಿ. ಆ ಏಣಿ ತುಂಬ ನೇರವಾಗಿರುತ್ತದೆ (very straight)


ಗಾಳಿಯಂತ್ರದ ಒಳಗಿನ ನೋಟ. ಗಾಳಿಯ ಚಲನೆಗೆ ತಿರುಗಿಸಲು ಹಾಗು ವಿದ್ಯುತ್ ಸಂಗ್ರಹಿಸಿ ಸಾಗಿಸಲು ಬೇಕಾದ ಯಂತ್ರಗಳು.



ಗಾಳಿಯಂತ್ರದ ಮೇಲೇರಿದಾಗ ತೆಗೆದ ಚಿತ್ರಗಳು.

ಇನ್ನು ಕೋಟೆಯ ಕಡೆಗೆ......

ಕೋಟೆಯ ಹೊರಗಡೆ ಇರುವ ಕೊಳ.


ಮದ್ದು ಬೀಸುವ ಕಲ್ಲುಗಳು..


ಕೋಟೆಯ ಒಳಗೆ.


ಟಂಕಸಾಲೆ ಮತ್ತು ಪಾಳೇಗಾರರ ಕಚೇರಿ.


ಅಕ್ಕ ತಂಗಿ ಕೊಳ.


ಕಾಶಿವಿಶ್ವನಾಥ ದೇವಾಲಯ.


ನನ್ನ ಹಾಗು ನನ್ನ ಸ್ನೇಹಿತರ ಸಣ್ಣ ಪುಟ್ಟ ಸಾಹಸಗಳು... :D


ಇದು ಒನಕೆ ಓಬವ್ವನ ಮನೆಯಂತೆ, ಅದಕ್ಕೆ ಊಟ ಮಾಡೋ ಫೋಸ್ ಕೊಟ್ಟಿದ್ದು.


ಇದೆ ಕಿಂಡಿಯಲ್ಲಿ ನುಸುಳಿ ಬಂದ ಎದುರಾಳಿ ಸೈನಿಕರನ್ನು ಒನಕೆಯಿಂದ ಹೊಡೆದು ಸಾಯಿಸಿದ ಓಬವ್ವ. ಸದ್ಯಕ್ಕೆ ಆ ಸ್ಥಳದಲ್ಲಿ ಒನಕೆ ಇಲ್ಲದ ಕಾರಣ, ವಾಟರ್ ಬಾಟಲ್ನೆ ಒನಕೆ ಅಂತ ತಿಳ್ಕೊಳಿ :P



ಚಂದ್ರವಳ್ಳಿ ಕೆರೆ ಹಾಗು ಗುಹೆ.



ಪ್ರಾಣಿ ಸಂಗ್ರಹಾಲಯ..
Share/Save/Bookmark