Wednesday, June 27, 2012

ಪುಸ್ತಕದ ಮನೆ


ಪುಸ್ತಕದ ಮನೆ
 ಮನುಷ್ಯನಲ್ಲಿ ಧೃಡವಾದ ಆತ್ಮವಿಶ್ವಾಸವಿದ್ದರೆ ಅಸಾಧ್ಯವೆಂಬುದು ಯಾವುದೂ ಇಲ್ಲ. ನೆಪೋಲಿಯನ್ ಹೇಳುತ್ತಾನೆ "ಅಸಾಧ್ಯ ಎಂಬುದು ಮೂರ್ಖರ ಕೋಶದಲ್ಲಿ ಸಿಗುವ ಶಬ್ದ ಮಾತ್ರ" ಎಂದು. ಈ ಪ್ರಪಂಚದಲ್ಲಿ ಯಾವುದೂ ಕೂಡ ಅಸಾಧ್ಯವಲ್ಲ. ಸಾಧಿಸಬೇಕೆಂಬ ಛಲ ಇದ್ದರೆ ಸಾಕು ಮನುಷ್ಯ ಏನನ್ನು ಬೇಕಾದರೂ ಸಾಧಿಸುತ್ತಾನೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ "ಅಂಕೇಗೌಡ್ರು" ಆಗಿದ್ದಾರೆ. ಇವರು ಮಾಡಿರುವ ಸಾಧನೆ ಶೈಕ್ಷಣಿಕ ಕ್ಷೇತ್ರದಲ್ಲಿಯೇ ಒಂದು ಕ್ರಾಂತಿ ಅಂತ ಹೇಳಿದರೆ ತಪ್ಪಾಗಲಾರದು. ಅಂಕೇಗೌಡ್ರು ಒಂದು ಬೃಹತ್ ಗ್ರಂಥಾಲಯವನ್ನು ತೆರೆದಿದ್ದಾರೆ ಅದು ಅವರ ಸ್ವಂತ ಖರ್ಚಿನಲ್ಲೇ..!!. ಇದು ಬಹುಶಃ ಕರ್ನಾಟಕದ ಅತಿದೊಡ್ಡ ಗ್ರಂಥಾಲಯವೇ ಇರಬಹುದು. ಈ ರೀತಿ ಗ್ರಂಥಾಲಯವನ್ನು ನನ್ನ ಕನಸಲ್ಲೂ ಕೂಡ ನಾನು ನೋಡಿರಲಿಲ್ಲ. "ದೇಶ ಸುತ್ತಿ ನೋಡು ಕೋಶ ಓದಿ ನೋಡು" ಎಂಬ ಗಾದೆಯನ್ನು ನೋಡಿದಾಗ ದೇಶವನ್ನು ಸುತ್ತುವುದೇ ಬೇಡ ಅಂಕೇಗೌಡ್ರು ಸಂಗ್ರಹಿಸಿದ ಪುಸ್ತಕ ಓದಿದರೆ ಸಾಕು, ಇಡೀ ಪ್ರಪಂಚವನ್ನೇ ಸುತ್ತಿದ ಅನುಭವ ನಮ್ಮದಾಗುತ್ತದೆ.
ಪುಸ್ತಕದ ಮನೆಯ ಒಳನೋಟ..

 ಥಾಮಸ್ ಜೆ. ವಿಲಾರ್ಡ್ ಅವರು ಹೇಳಿದ್ದಾರೆ "ಅಸಾಧ್ಯವೆಂದು ಭಾವಿಸಿದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಾಧ್ಯವೆಂದು ಭಾವಿಸಿದರೆ ಯಾವುದೂ ಅಸಾಧ್ಯವಲ್ಲ. ರಚನಾತ್ಮಕವಾಗಿ ಯೋಚಿಸಿ, ಕಷ್ಟಪಟ್ಟು ದುಡಿದರೆ ಆಗ ಎಲ್ಲವೂ ಸಾಧ್ಯ" ಎಂಬ ಮಾತನ್ನು ಅಂಕೇಗೌಡ್ರು ಅಕ್ಷರಶಃ ಸಾಧಿಸಿಯೇ ತೋರಿಸಿದ್ದಾರೆ.
ಅಂಕೇಗೌಡ್ರು ಹಾಗು ಅವರ ಧರ್ಮಪತ್ನಿ ಜಯಲಕ್ಷ್ಮಿ
ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಅಂಕೇಗೌಡ್ರು ಅವರ ಧರ್ಮಪತ್ನಿ ಜಯಲಕ್ಷ್ಮಿಯವರು.  ಒಂದು ಸಾರಿ ಕ್ಲಿಂಟನ್ ಹಾಗೂ ಅವನ ಹೆಂಡತಿ ಹಿಲೆರಿಕ್ಲಿಂಟನ್ ಕಾರಲ್ಲಿ ಹೋಗುತ್ತಿರುವಾಗ, ಆಕೆಯ ಮಾಜಿ ಪ್ರಿಯಕರ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದದ್ದನ್ನು ನೋಡಿ ಕ್ಲಿಂಟನ್ ಕಾರು ನಿಲ್ಲಿಸಿ ಹೇಳಿದ "ಸ್ವೀಟಿ, ನೀನೇನಾದರೂ ಗ್ಯಾರೇಜಿನಲ್ಲಿ ಇರೋನನ್ನು ಮದುವೆಯಾಗಿದ್ದರೆ ನೀನು ಗ್ಯಾರೇಜ್ ನಲ್ಲಿ ಕೆಲಸ ಮಾಡುವವನ ಹೆಂಡತಿ ಎಂದು ಅನಿಸಿಕೊಳ್ಳುತ್ತಿದೆ" ಎಂದಾಗ ಆಕೆ ಹೇಳುತ್ತಾಳೆ, "ಒಂದು ವೇಳೆ ನಾನು ಅವನನ್ನೇ ಮದುವೆಯಾಗಿದ್ದರೆ ನೀವಿರುವ ಜಾಗದಲ್ಲಿ ಅವನಿರುತ್ತಿದ್ದ" ಎಂದು ಹೇಳಿತ್ತಲಿದ್ದಂತೆ ಕ್ಲಿಂಟನ್ ತಲೆಬಾಗಿಸಿ ಕಾರಿನ ಚಾಲಕನಿಗೆ ಮುಂದೆ ಹೋಗುವಂತೆ ಹೇಳುತ್ತಾನೆ. ಯಾವುದೇ ಒಬ್ಬ ಯಶಸ್ವೀ ಪುರುಷನ ಹಿಂದೆ ’ಸ್ತ್ರೀ’  ಇರುತ್ತಾಳೆ. ಪತಿಯ ಸಾಧನೆಗೆ ಆಕೆಯ ತ್ಯಾಗ, ಆಸೆ, ಆಕಾಂಕ್ಷೆಗಳನ್ನು ಪತಿಯು ಏರುವ ಮೆಟ್ಟಿಲುಗಳಾಗಿ ಮಾಡಿ ಅವನನ್ನು ಒಬ್ಬ ಉತ್ತಮ ಸಾಧಕನನ್ನಾಗಿ ಮಾಡುವ ಗುರಿಯನ್ನು ಹೊಂದಿರುತ್ತಾಳೆ.


ಇಲ್ಲಿ ಅಂಕೇಗೌಡ್ರು ಅವರ ಪತ್ನಿಯನ್ನು ಸ್ಮರಿಸಲೇಬೇಕು. ಅಂಕೇಗೌಡ್ರು ಇಂದು ಏನೇ ಸಾಧಿಸಿದರೂ ಅದಕ್ಕೆ ಅವರ ಎಲ್ಲಾ ಸಾಧನೆಗೆ ಸ್ಪೂರ್ತಿಯೇ ಅವರ ಧರ್ಮಪತ್ನಿಯಾಗಿದ್ದಾರೆ. ಒಟ್ಟಲ್ಲಿ ಒಬ್ಬ ಕ್ರಿಯಾಶೀಲನಾಗಿರುವ ವ್ಯಕ್ತಿಗೆ ಯಾವುದೇ ಒಂದು ಗುರಿ ಸಾಧಿಸಬೇಕೆಂಬ ಛಲ ಇದ್ದಾಗ ಅದು ಕಷ್ಟ ಎನಿಸಲು ಸಾಧ್ಯವಾಗದು. ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ ಹಾಗೆ "ಪ್ರತಿಯೊಬ್ಬ ಮನುಷ್ಯನೂ ತಾನು ಜನ್ಮ ಪಡೆದಿರುವುದು ಒಂದು ಉತ್ತಮ ಕಾರ್ಯ ಸಾಧನೆಗೆ" ಎಂಬುದಕ್ಕೆ ಅಂಕೇಗೌಡ್ರು ಸಾಧನೆ ಮಾಡಿ ತೋರಿದ್ದಾರೆ. ಹಾಗೆಯೇ ಅವರ ಆಸೆಯ ಕನಸಿನ ಮಗುವಾದ ಆ ಗ್ರಂಥಾಲಯದ ಉನ್ನತೀಕರಣಕ್ಕೆ ನಾವು ನೀವು ಕೈಜೋಡಿಸೋಣ. ಈ ಪುಟ್ಟ ಮಗುವಾದ ಗ್ರಂಥಾಲಯವನ್ನು ಬೃಹತ್ ಗ್ರಂಥಾಲಯವನ್ನಾಗಿ ಮಾಡೋಣ. ಇದು ಪ್ರಪಂಚದ ದೊಡ್ಡ ಗ್ರಂಥಾಲಯವಾಗಿ ಹೆಸರು ಪಡೆಯಲಿ ಅಂಕೇಗೌಡ್ರು ಹೆಸರು ಚಿರಸ್ಮರಣೀಯವಾಗಿರಲಿ ಎಂದು ಹಾರೈಸೋಣ.
ಸ್ನೇಹಿತರು @ ಬ್ಲಾಗ್ ಲೋಕ
(ಚಿತ್ರ ಕೃಪೆ: ಗಿರೀಶ್.ಎಸ್ )

ಇಂತಹ ಜ್ಞಾನ ಭಂಡಾರವನ್ನು ಪರಿಚಯಿಸಿದ ಬಾಲಣ್ಣ, ಪ್ರಕಾಶಣ್ಣ ಹಾಗು ಬ್ಲಾಗ್ ಲೋಕದ ಮಿತ್ರರಿಗೆ ನನ್ನದೊಂದು ಪ್ರೀತಿಪೂರ್ವಕ ಧನ್ಯವಾದಗಳು... 

 -ಶಿವುನಂದು.

Share/Save/Bookmark